ಅಪಾರ್ಟ್‌ಮೆಂಟ್ ನಿಂದ ಆಯತಪ್ಪಿ ಬಿದ್ದ ಬಾಲಕ.. ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ - ಈಟಿವಿ ಭಾರತ ಕನ್ನಡ
ಬೆಂಗಳೂರು:ಕೆಂಗೇರಿ ಸಮೀಪದ ಬಿಡಿಎ ಅಪಾರ್ಟ್ಮೆಂಟ್ವೊಂದರಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನೊಬ್ಬ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ. ಕೆಂಗೇರಿ ಬಳಿಯ ಜ್ಞಾನಭಾರತಿ ಎನ್ಕ್ಲೇವ್ ಅಪಾರ್ಟ್ಮೆಂಟ್ನ ರಾಹುಲ್ ಗಾಯಗೊಂಡಿರುವ ಮಗು. ದುರ್ಘಟನೆ ವೇಳೆ ಮಗುವಿನ ಪಾಲಕರು ಮನೆಯಲ್ಲೇ ಇದ್ದರು. ಶುಕ್ರವಾರ ಬೆಳಗ್ಗೆ 11.30ಕ್ಕೆ ರಾಹುಲ್ ತಾಯಿ ಅಂಬಿಕಾ ಮತ್ತೊಂದು ಮಗುವಿಗೆ ಊಟ ಮಾಡಿಸುತ್ತಿದ್ದರು. ಆ ವೇಳೆ ಎರಡನೇ ಮಹಡಿಯಲ್ಲಿ ಮನೆಯ ಮುಂದೆ ಬಾಲ್ಕನಿಯಲ್ಲಿ ರಾಹುಲ್ ಆಟವಾಡುತ್ತಿದ್ದ. ಅಲ್ಲಿದ್ದ ಚೇರ್ ಹತ್ತಿ ಅಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಮೇಲಿನಿಂದ ಬಿದ್ದಿರುವ ರಭಸಕ್ಕೆ ಮಗುವಿನ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಎರಡನೇ ಮಹಡಿಯಿಂದ ಬಾಲಕ ಬೀಳುವ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಲ್ಯಾಣ ಕರ್ನಾಟಕದ ಕಲಬುರಗಿ ಮೂಲದ ಶಿವಪ್ಪ ಮತ್ತು ಅಂಬಿಕಾ ದಂಪತಿ ಜ್ಞಾನಭಾರತಿ ಎನ್ಕ್ಲೇವ್ ಅಪಾರ್ಟ್ ಮೆಂಟ್‌ನ ಕಾವೇರಿ ಬ್ಲಾಕ್‌ನಲ್ಲಿ ಸುಮಾರು 3 ವರ್ಷದಿಂದ ವಾಸವಿದ್ದಾರೆ. ಬಾಲಕನ ತಂದೆ ಶಿವಪ್ಪ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ:ಅಣ್ಣನ ಜೊತೆ ಗಾಳಿಪಟ ಹಾರಿಸುವ ವೇಳೆ ಮೇಲಿಂದ ಬಿದ್ದು ಬಾಲಕ ಸಾವು..!