ಸಿಡ್ನಿ: ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡುವುದು ಬಹಳ ಮುಖ್ಯ. ಆದರೆ, ನಿತ್ಯ ಸ್ವಲ್ಪ ವ್ಯಾಯಾಮ ಮಾಡುವುದು ಉತ್ತಮವೇ ಅಥವಾ ವಾರದಲ್ಲಿ ಯಾವಾಗಲೋ ಒಮ್ಮೆ ಹೆಚ್ಚು ಪ್ರಮಾಣದಲ್ಲಿ ವ್ಯಾಯಾಮ ಮಾಡುವುದು ಉತ್ತಮವೇ? ಹೊಸ ಸಂಶೋಧನೆಯ ಪ್ರಕಾರ ನಿತ್ಯ ಸ್ವಲ್ಪಮಟ್ಟಿಗಿನ ವ್ಯಾಯಾಮ ಮಾಡುವುದು ಸೂಕ್ತ ಎನ್ನಲಾಗಿದೆ.
ನಿಯಮಿತವಾಗಿ ಮಾಡಬಹುದಾದ ವ್ಯಾಯಾಮಗಳು ದೈಹಿಕ ಸಾಮರ್ಥ್ಯ ಹೆಚ್ಚಿಸುವಲ್ಲಿ ನಿಜವಾದ ಪರಿಣಾಮ ಬೀರುತ್ತವೆ ಎಂದು ಅಧ್ಯಯನಗಳು ಹೇಳಿವೆ. ಜನರು ಜಿಮ್‌ನಲ್ಲಿ ಸುದೀರ್ಘ ಅವಧಿಯವರೆಗೆ ವ್ಯಾಯಾಮ ಮಾಡಬೇಕೆಂದು ಭಾವಿಸುತ್ತಾರೆ, ಆದರೆ ಅದು ಸರಿಯಲ್ಲ ಎನ್ನುತ್ತಾರೆ ಕೆನ್ ನೊಸಾಕಾ. ಕೆನ್ ಇವರು ಆಸ್ಟ್ರೇಲಿಯಾದ ಎಡಿತ್ ಕೋವನ್ ವಿಶ್ವವಿದ್ಯಾಲಯದಲ್ಲಿ (ECU) ವ್ಯಾಯಾಮ ಮತ್ತು ಕ್ರೀಡಾ ವಿಜ್ಞಾನ ಪ್ರಾಧ್ಯಾಪಕರಾಗಿದ್ದಾರೆ. ಭಾರೀ ಡಂಬೆಲ್ ಒಂದನ್ನು ದಿನಕ್ಕೆ ಒಮ್ಮೆ ಅಥವಾ ಆರು ಬಾರಿ ನಿಧಾನವಾಗಿ ಎತ್ತಿ ಇಳಿಸಿದರೆ ಸಾಕು ಎನ್ನುತ್ತಾರೆ ಕೆನ್.
ಎಡಿತ್ ಕೋವನ್ ವಿಶ್ವವಿದ್ಯಾಲಯದ ತಂಡವು ಜಪಾನ್‌ನ ನಿಗಾಟಾ ವಿಶ್ವವಿದ್ಯಾಲಯ ಮತ್ತು ನಿಶಿ ಕ್ಯುಶು ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ನಾಲ್ಕು ವಾರಗಳ ಕಾಲ ವ್ಯಾಯಾಮ ತರಬೇತಿಯ ಬಗ್ಗೆ ಅಧ್ಯಯನಗಳನ್ನು ನಡೆಸಿತು. ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಮೂರು ಗುಂಪುಗಳು ತೋಳಿನ ಪ್ರತಿರೋಧ ವ್ಯಾಯಾಮ ಮತ್ತು ಸ್ನಾಯುವಿನ ಬಲದಲ್ಲಿ ಬದಲಾವಣೆಗಳನ್ನು ತೋರುವ ವ್ಯಾಯಾಮಗಳನ್ನು ಪ್ರದರ್ಶಿಸಿದವು.
ಇವರೆಲ್ಲರ ಸ್ನಾಯುವಿನ ದಪ್ಪವನ್ನು ಅಳೆಯಲಾಯಿತು ಮತ್ತು ಪರಸ್ಪರ ಹೋಲಿಕೆ ಮಾಡಲಾಯಿತು. ವ್ಯಾಯಾಮವು - ಗರಿಷ್ಠ ಸ್ವಯಂಪ್ರೇರಿತ ವಿಕೇಂದ್ರಿತ ಬೈಸೆಪ್ ಸಂಕೋಚನಗಳನ್ನು- (maximal voluntary eccentric bicep contractions) ಒಳಗೊಂಡಿತ್ತು. ಜಿಮ್‌ನಲ್ಲಿ ಅವರು ಮಾಡುವ ಪ್ರತಿಯೊಂದು ವ್ಯಾಯಾಮದ ಸ್ನಾಯುವಿನ ಸಂಕೋಚನದಲ್ಲಿ ಉಂಟಾಗುವ ಸ್ನಾಯುವಿನ ಬಲವನ್ನು ಅಳೆಯಬಹುದಾದ ಜಿಮ್ ಮಶೀನ್ನಲ್ಲಿ ಈ ವ್ಯಾಯಾಮಗಳನ್ನು ಮಾಡಲಾಯಿತು.
ವಿಕೇಂದ್ರಿತ ಸಂಕೋಚನವೆಂದರೆ ಸ್ನಾಯು ಉದ್ದವಾಗುವುದು; ಈ ಸಂದರ್ಭದಲ್ಲಿ, ಬೈಸೆಪ್ ಕರ್ಲ್‌ನಲ್ಲಿ ಭಾರವಾದ ಡಂಬೆಲ್ ಅನ್ನು ಕೆಳಗಿಳಿಸಿದಂತೆ ಎಂದರ್ಥ. ಎರಡು ಗುಂಪುಗಳು ವಾರಕ್ಕೆ 30 ಸಂಕೋಚನ ವ್ಯಾಯಾಮಗಳನ್ನು ನಿರ್ವಹಿಸಿದವು. ಒಂದು ಗುಂಪು ವಾರದಲ್ಲಿ ಐದು ದಿನಗಳವರೆಗೆ ದಿನಕ್ಕೆ ಆರು ಸಂಕೋಚನಗಳನ್ನು ಮಾಡಿತು (6 x 5 ಗುಂಪು). ಇನ್ನೊಂದು ಗುಂಪು ವಾರಕ್ಕೊಂದು ಬಾರಿಯಂತೆ (30 x 1 ಗುಂಪು) ಒಂದೇ ದಿನದಲ್ಲಿ ಎಲ್ಲಾ 30 ಸಂಕೋಚನ ವ್ಯಾಯಾಮಗಳನ್ನು ಮಾಡಿತು. ಇನ್ನೊಂದು ಗುಂಪು ವಾರದಲ್ಲಿ ಒಂದು ದಿನ ಮಾತ್ರ ಆರು ಸಂಕೋಚನ ವ್ಯಾಯಾಮಗಳನ್ನು ನಡೆಸಿತು.