ಕಾನ್ಪುರ್: ಹೃದ್ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಔಷಧಗಳಿರುವ 'ರಾಮ್ ಕಿಟ್' ಅನ್ನು ಕಾನ್ಪುರದ ಲಕ್ಷ್ಮೀಪತ್ ಸಿಂಘಾನಿಯಾ ಇನ್ಸಿಟಿಟ್ಯೂಟ್ ಆಫ್ ಕಾರ್ಡಿಯಾಲಾಜಿ ಮತ್ತು ಕಾರ್ಡಿಯಾಕ್ ಸರ್ಜರಿ ಅಭಿವೃದ್ಧಿಪಡಿಸಿದೆ. ಈ ಕಿಟ್ನಲ್ಲಿ ರಾಮನ ಚಿತ್ರದೊಂದಿಗೆ ಜೀವ ಉಳಿಸುವ ಪ್ರಮುಖ ಔಷಧಗಳು ಮತ್ತು ಆಸ್ಪತ್ರೆಯ ಸಹಾಯವಾಣಿಯ ಸಂಖ್ಯೆ ಇದೆ. ಈ ಕಿಟ್ 'ನಾವು ಚಿಕಿತ್ಸೆ ನೀಡುತ್ತೇವೆ. ಅವರು (ರಾಮ) ಗುಣಪಡಿಸುತ್ತಾರೆ' ಎಂಬ ಪರಿಕಲ್ಪನೆ ಹೊಂದಿದೆ.
ರಾಮ್ ಕಿಟ್ ಅನ್ನು ಪ್ರಯಾಗ್ರಾಜ್ ಜಿಲ್ಲೆಯ ಸುಮಾರು 5 ಸಾವಿರ ಕುಟುಂಬಗಳಿಗೆ ಕಂಟೋನ್ಮೆಂಟ್ ಆಸ್ಪತ್ರೆಯ ಅಧಿಕಾರಿ ನೀಡಲಿದ್ದಾರೆ. ಈ ರೀತಿಯ ಕಿಟ್ ನೀಡುತ್ತಿರುವ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಕೂಡ ಈ ಆಸ್ಪತ್ರೆ ಪಾತ್ರವಾಗಿದೆ. 'ರಾಮ್ ಕಿಟ್'ನಲ್ಲಿ ಇಕೋಸ್ಪಿನ್ (ರಕ್ತ ತೆಳುಗೊಳಿಸುವ), ರೋಸುವಾಸ್ಟಾಟಿನ್ (ಕೊಲೆಸ್ಟ್ರಾಲ್ ನಿಯಂತ್ರಣ) ಮತ್ತು ಸೋರ್ಬಿಟ್ರೇಟ್ (ಹೃದಯದ ಉತ್ತಮ ಕಾರ್ಯಾಚರಣೆ) ಔಷಧಗಳನ್ನು ಇದು ಹೊಂದಿದೆ. ಈ ಔಷಧಗಳು ಹೃದಯದ ಸಮಸ್ಯೆ ಹೊಂದಿರುವವರಿಗೆ ತಕ್ಷಣದ ಪರಿಹಾರ ನೀಡುತ್ತದೆ. ಚಳಿಗಾಲದಲ್ಲಿ ಹೃದ್ರೋಗ ಮತ್ತು ಮಿದುಳಿನ ಪಾರ್ಶ್ವವಾಯು ಪ್ರಕರಣ ಹೆಚ್ಚುವ ಹಿನ್ನೆಲೆಯಲ್ಲಿ ರಾಮ್ ಕಿಟ್ ಪ್ರತಿಯೊಬ್ಬರಿಗೂ ಉಪಯೋಗವಾಗಲಿದೆ. ರೋಗಿಯ ಗೋಲ್ಡನ್ ಅವರ್ನಲ್ಲಿ ಜೀವ ಉಳಿಸಲು ಸಹಾಯ ಮಾಡುತ್ತದೆ ಎಂದು ಕಂಟೋನ್ಮೆಂಟ್ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಕೆ.ಪಾಂಡೆ ತಿಳಿಸಿದ್ದಾರೆ.