ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕಿನ ಅಪಾಯ ಕಡಿಮೆ ಆಗುತ್ತದೆ. ಲಸಿಕೆ ಪಡೆದ ಬಳಿಕ ವ್ಯಕ್ತಿಯೊಬ್ಬನ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ಸಂಶೋಧನೆ ವಿವರಿಸಿದೆ. ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ. ಅಧ್ಯಯನದಲ್ಲಿ ಪೈಜರ್, ಬಯೋಟೆಕ್ ಕೋವಿಡ್ ಲಸಿಕೆ ಪಡೆದವರಲ್ಲಿ ಪ್ರತಿರಕ್ಷಣಾ ಕೋಶ ಹೆಚ್ಚಿದೆ. ಲಸಿಕೆಯ ನಂತರದಲ್ಲಿ ಸಾರ್ಸ್- ಕೋವ್-2 ಸೋಂಕು ಅಧ್ಯಯನ ನಡೆಸಿದಾಗ ಅದರ ತೀವ್ರತೆಯ ಮಟ್ಟ ಕಡಿಮೆಯಾಗಿದೆ ಎಂದು ಅಧ್ಯಯನ ಹೇಳುತ್ತದೆ.
ಪ್ರತಿರಕ್ಷಣೆ ಹಾನಿ ತಡೆಯುತ್ತದೆ: ಕೋವಿಡ್ ಲಸಿಕೆ ಪಡೆಯದವರಿಗಿಂತ ಪಡೆದವರಲ್ಲಿ ಸಾರ್ಸ್-ಕೋವ್-2 ಲಕ್ಷಣಗಳ ಪ್ರಭಾವ ಕಡಿಮೆ ಇದೆ. ಅಲ್ಲದೇ ಸಾರ್ಸ್ ಕೋವ್- 2 ಸ್ಪೈಕ್ ಪ್ರೋಟೀನ್ ಅನ್ನು ಗುರಿಯಾಗಿಸುವ ಪ್ರತಿರಕ್ಷಣಾ ಕೋಶದಲ್ಲೂ ಸುಧಾರಣೆ ಕಾಣಬಹುದಾಗಿದೆ. ಸಾರ್ಸ್-ಕೋವ್-2 ಸೋಂಕಿನಿಂದ ಚೇತರಿಕೆ ಕಂಡು ಲಸಿಕೆ ಪಡೆದವರು, ಲಸಿಕೆ ಪಡೆಯದವರಿಗಿಂತ ಹೆಚ್ಚು ರಕ್ಷಣೆಗೆ ಒಳಗಾಗುತ್ತಾರೆ. ಸೋಂಕು ನಮ್ಮ ಪ್ರಮುಖ ಪ್ರತಿರಕ್ಷಣೆ ಮೇಲೆ ಹಾನಿ ಮಾಡುವುದನ್ನು ಲಸಿಕೆ ತಡೆಯುತ್ತದೆ ಎಂಬುದನ್ನು ಫಲಿತಾಂಶ ತಿಳಿಸಿದೆ. ಈ ಸಂಬಂಧ ಜರ್ನಲ್ ಇಮ್ಯುನಿಟಿಯಲ್ಲಿ ಕೂಡ ಪ್ರಕಟವಾಗಿದೆ.
ಸ್ಟ್ಯಾನ್‌ಫೋರ್ಡ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಮೈಕ್ರೋಬಯಾಲಜಿ ಮತ್ತು ಇಮ್ಯುನೊಲಾಜಿಯ ಪ್ರಾಧ್ಯಾಪಕರಾದ ಮಾರ್ಕ್ ಎಂ ಡೇವಿಸ್ ನೇತೃತ್ವದಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಸಂಶೋಧಕರು CD4+ T ಜೀವಕೋಶಗಳು ಮತ್ತು CD8+ T ಜೀವಕೋಶಗಳು SARS-CoV-2 ಸೋಂಕು ಮತ್ತು ಲಸಿಕೆಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ವಿಶ್ಲೇಷಿಸಲು ಅತ್ಯಂತ ಸೂಕ್ಷ್ಮವಾದ ಸಾಧನವನ್ನು ವಿನ್ಯಾಸಗೊಳಿಸಿದ್ದಾರೆ.