ನ್ಯೂಯಾರ್ಕ್: ಅಮೆರಿಕದಲ್ಲಿ ಕೋವಿಡ್ 19ನ ಉಪತಳಿ ಜೆಎನ್.1 ಅಲೆ ಉಲ್ಬಣಗೊಂಡಿದೆ. ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕ ಆಸ್ಪತ್ರೆಗಳಲ್ಲಿ ಮಾಸ್ಕ್ ಧಾರಣೆಯನ್ನು ಕಡ್ಡಾಯ ಮಾಡಲಾಗಿದೆ.
ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಇತ್ತೀಚಿನ ಮಾಹಿತಿಯಂತೆ, ಕ್ರಿಸ್ಮಸ್ ಬಳಿಕ ಅಮೆರಿಕದಲ್ಲಿ ಜೆಎನ್.1 ಪ್ರಸರಣ ಹೆಚ್ಚುತ್ತಿದೆ. ಕಳೆದೆರಡು ವಾರದಿಂದ ಜೆಎನ್.1 ಸೋಂಕಿನ ಪ್ರಕರಣದಲ್ಲಿ ಶೇ.39-50ರಷ್ಟು ಏರಿಕೆಯಾಗಿದೆ. ಪ್ರವಾಸಿಗರು ಹಾಗು ನೀರಿನ ತ್ಯಾಜ್ಯದಿಂದ ಸೋಂಕು ಹರಡುತ್ತಿದೆ. ಜಗತ್ತಿನ ಇತರೆಡೆಗಳಲ್ಲೂ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಕುರಿತು ಗಮನಿಸಲಾಗಿದೆ ಎಂದು ಎಚ್ಚರಿಸಿದೆ.
ಲಾಸ್ ಏಂಜಲೀಸ್ ಕೌಂಟಿ ಮತ್ತು ನ್ಯೂಯಾರ್ಕ್ ಸಿಟಿಯಲ್ಲಿ ಆರೋಗ್ಯ ವಲಯದ ಎಲ್ಲಾ ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಎಬಿಸಿ7 ವರದಿ ಮಾಡಿದೆ. ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ನರ್ಸಿಂಗ್ ಹೋಮ್ಸ್ ಮತ್ತು ಎನ್ವೈಸಿ ಸಾರ್ವಜನಿಕ ಆಸ್ಪತ್ರೆ ವ್ಯವಸ್ಥೆಗಳಲ್ಲಿ ಈ ನಿಯಮ ಪಾಲನೆ ಅತ್ಯವಶ್ಯಕ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆಸ್ಪತ್ರೆಗಳಲ್ಲಿ ಕೋವಿಡ್, ಜ್ವರ ಮತ್ತು ಆರ್ಎಸ್ವಿಗಳು ಏರಿಕೆಯಾಗುತ್ತಿದೆ. ಈ ಸಂದರ್ಭದಲ್ಲಿ ನಾವು ನಮ್ಮ ರೋಗಿಗಳು, ಸಿಬ್ಬಂದಿ ಮತ್ತು ಸಮುದಾಯವನ್ನು ರಕ್ಷಿಸಬೇಕಿದೆ ಎಂದು ನ್ಯೂಯಾರ್ಕ್ನ ಹೆಲ್ತ್ ಪ್ಲಸ್ ಆಸ್ಪತ್ರೆ ವಕ್ತಾರರು ಹೇಳಿದ್ದಾರೆ.
ದೀರ್ಘ ಕೋವಿಡ್ನಿಂದ 3,500 ಮಂದಿ ಸಾವು:2020ರ ಜನವರಿಯಿಂದ 2022ರ ಜೂನ್ ಅಂತ್ಯದವರೆಗೆ ದೀರ್ಘ ಕೋವಿಡ್ನಿಂದ 3,544 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಸಿಡಿಸಿ ತಿಳಿಸಿದೆ. ಕೋವಿಡ್ನಿಂದ ಸಾವನ್ನಪ್ಪಿದ 1,021,487 ಪ್ರಕರಣದಲ್ಲಿ ದೀರ್ಘಾವಧಿ ಕೋವಿಡ್ನಿಂದ ಸಾವನ್ನಪ್ಪಿದವರ ಸಂಖ್ಯೆ ಶೇ.1ರಷ್ಟಿದೆ. ಈ ಮೊದಲೂ ಕೋವಿಡ್ ಅನಾರೋಗ್ಯದ ಇತಿಹಾಸ ಹೊಂದಿರುವವರು ಕೋವಿಡ್ ನಂತರದ ತೀವ್ರ ಪರಿಣಾಮಗಳು ಮತ್ತು ಸಾವಿನ ಅಪಾಯವನ್ನು ಹೆಚ್ಚು ಹೊಂದಿದ್ದಾರೆ ಎಂದು ಹೇಳಿದೆ.
ದೀರ್ಘ ಕೋವಿಡ್ ಎಂಬುದು ಸಾರ್ಸ್ ಕೋವ್ 2 ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿ ದೀರ್ಘಾವಧಿ ಪರಿಣಾಮಕ್ಕೆ ಒಳಗಾಗುವ ಪ್ರಕ್ರಿಯೆ. 2021ರಲ್ಲಿ ದೀರ್ಘ ಕೋವಿಡ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಇದರಿಂದ ಸಾಕಷ್ಟು ಮಂದಿ ಸಾವನ್ನಪ್ಪಿದ್ದರು ಎಂದು ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ:ಕೋವಿಡ್ ಅಲೆಯನ್ನು ಮುಂಚೆಯೇ ಅಂದಾಜಿಸುವ ಹೊಸ ಎಐ ಮಾದರಿ