ನ್ಯೂಯಾರ್ಕ್: ಪೀಕ್ ಸಮಯದಲ್ಲಿನ ಟ್ರಾಫಿಕ್ ಜಾಮ್ನಲ್ಲಿ ಫಿಲ್ಟರ್ ಮಾಡಿರದ ಗಾಳಿಯನ್ನು ಉಸಿರಾಡುವುದರಿಂದ 24 ಗಂಟೆಗಳ ಬಳಿಕ ರಕ್ತದೊತ್ತಡ ಏರಿಕೆ ಕಾಣುತ್ತದೆ ಎಂದು ಅಧ್ಯಯನ ಎಚ್ಚರಿಸಿದೆ. ದೆಹಲಿ, ಗುರುಗ್ರಾಮ್, ಗಾಜಿಯಾಬಾದ್ ಸೇರಿದಂತೆ ಹಲವೆಡೆ ಕಳೆದೊಂದು ತಿಂಗಳಿನಿಂದ ಕೆಟ್ಟ ಗಾಳಿ ಬೀಸುತ್ತಿದ್ದು, ಇದು ಪ್ರಯಾಣಿಕರು ಹಾಗು ಸವಾರರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ವರದಿ ಎಚ್ಚರಿಸಿದೆ.
ರಸ್ತೆ ಧೂಳು, ಕಿತ್ತು ಬಂದಿರುವ ಪೈಪ್ ಮತ್ತು ಟೈರ್ಗಳು ಮಿಶ್ರಣಗೊಂಡು ಕೆಟ್ಟ ಗಾಳಿ ವಾತಾವರಣದಲ್ಲಿ ಕಂಡುಬರುತ್ತದೆ. ಇದನ್ನು ಉಸಿರಾಡುವುದರಿಂದ ಹೃದಯರೋಗ ಸಮಸ್ಯೆ, ಅಸ್ತಮಾ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಸಾವಿನ ಅಪಾಯವೂ ಎದುರಾಗಬಹುದು.
ಅನ್ನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಹೊಸ ಅಧ್ಯಯನದಲ್ಲಿ, ಟ್ರಾಫಿಕ್ ಸಮಯದಲ್ಲಿ ಸಿಲುಕಿ ವಾಹನದಲ್ಲಿ ಕುಳಿತು ಉಸಿರಾಡುವ ಗಾಳಿಯಲ್ಲಿ 4.5 ಎಂಎಂಎಚ್‌ಜಿಯಷ್ಟು ರಕ್ತದೊತ್ತಡ ಹೆಚ್ಚುತ್ತದೆ. ಕೇವಲ 60 ನಿಮಿಷ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ 24 ಗಂಟೆಗಳೊಳಗೆ ರಕ್ತದೊತ್ತಡದಲ್ಲಿ ಬದಲಾವಣೆ ಕಾಣಬಹುದು.
ರಕ್ತದೊತ್ತಡದಲ್ಲಿ ಸಾಧಾರಣ ಹೆಚ್ಚಳ ಹಾಗು ಹೃದಯರಕ್ತನಾಳದ ಕಾಯಿಲೆಯ ಹೆಚ್ಚಳ ವಾಯುಮಾಲಿನ್ಯದೊಂದಿಗೆ ಸಂಬಂಧ ಹೊಂದಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ ಎಂದು ಅಮೆರಿಕದ ವಾಷಿಂಗ್ಟನ್ ಯುನಿವರ್ಸಿಟಿಯ ಪ್ರೊ.ಜೊಯೆಲ್ ಕುಫ್ಮಾನ್ ತಿಳಿಸಿದ್ದಾರೆ. ಹೃದಯ ಸಮಸ್ಯೆ ಹೆಚ್ಚಳಕ್ಕೆ ವಾಯು ಮಾಲಿನ್ಯದ ಕೊಡುಗೆ ಇದೆ ಎಂಬುದು ಇದರಿಂದ ತಿಳಿಯುತ್ತದೆ. ಕಡಿಮೆ ಮಟ್ಟದಲ್ಲಿ ರಸ್ತೆಮಾರ್ಗದ ವಾಯುಮಾಲಿನ್ಯ ರಕ್ತದೊತ್ತಡದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದಿದ್ದಾರೆ.