ನವದೆಹಲಿ: ಕಳೆದ ಮೂರು ವರ್ಷದ ಹಿಂದೆ ಜಗತ್ತು ಕಂಡಿದ್ದ ಕೊರೋನಾ ವೈರಸ್ ಸೋಂಕು ಮತ್ತೆ ಇದೀಗ ಉಲ್ಬಣವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಕಡಿಮೆ ಇದ್ದ ಸೋಂಕು ಇದೀಗ ಏರಿಕೆ ಕಂಡಿದ್ದು, ಮಹಾರಾಷ್ಟ್ರ ಮತ್ತು ನವದೆಹಲಿಯಲ್ಲಿ ಸೋಂಕಿನಿಂದ ಸಾವುಗಳು ಕೂಡ ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಜನರು ಸೋಂಕಿನ ಬಗ್ಗೆ ನಿರ್ಲಕ್ಷ್ಯವಹಿಸದೇ, ಮುನ್ನೆಚ್ಚರಿಕೆವಹಿಸಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಋತುಮಾನದ ಬದಲಾವಣೆ ಹಿನ್ನೆಲೆಯಲ್ಲಿ ಸೋಂಕು ಇದೀಗ ಶೀಘ್ರವಾಗಿ ಹರಡುತ್ತಿದೆ. ಕಳೆದ ಕೆಲವ ದಿನಗಳಿಂದ ಈ ಪ್ರಕರಣಗಳಲ್ಲಿ ಹೆಚ್ಚಳ ಕಂಡಿದೆ. ದೇಶದಲ್ಲಿ ಇದೀಗ ದಿನವೊಂದಕ್ಕೆ 3 ಸಾವಿರ ಪ್ರಕರಣಗಳು ದಾಖಲಾಗುತ್ತಿದೆ. ದೆಹಲಿಯಲ್ಲಿ ಕೋವಿಡ್ ಪ್ರಕರಣದಲ್ಲಿ ಭಾರೀ ಏರಿಕೆ ಕಂಡಿದ್ದು, ದಿನಕ್ಕೆ 400 ಪ್ರಕರಣಗಳು ದಾಖಲಾಗುತ್ತಿದೆ.
ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ: ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಮ್ಮು, ಶೀತ ಮತ್ತು ಜ್ವರ ಮತ್ತಿತ್ತರ ಕಾರಣಗಳಿಂದಾಗಿ ಬಿಎಲ್ಕೆ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಬಿಎಲ್ಕೆ ಆಸ್ಪತ್ರೆಗೆ ಎದೆ ಮತ್ತು ಶ್ವಾಸಕೋಶ ವಿಭಾಗದ ಮುಖ್ಯಸ್ಥರಾದ ಡಾ ಸಂದೀಪ್ ನಯರ್ ಮಾತನಾಡಿ, ಹೊರ ರೋಗಿಗಳ ವಿಭಾಗದಲ್ಲಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ ಎಂದಿದ್ದಾರೆ.
ಈ ಕುರಿತು ಎಎನ್ಐ ಜೊತೆ ಮಾತನಾಡಿರುವ ಅವರು, ಅನೇಕ ರೋಗಿಗಳಲ್ಲಿ ಕೋವಿಡ್ ಸೋಂಕಿನ ಲಕ್ಷಣ ಕಂಡು ಬರುತ್ತಿದೆ. ಹಲವು ದಿನಗಳಿಂದ ಅವರಲ್ಲಿ ಈ ಸೋಂಕಿನ ಲಕ್ಷಣ ಕಾಣಿಸುತ್ತಿದೆ. ಅವರನ್ನು ಪರೀಕ್ಷೆ ಮಾಡಿದಾಗ ಕೋವಿಡ್ ಸೋಂಕು ದೃಢವಾಗುತ್ತಿದೆ. ಕೋವಿಡ್ ಸೋಂಕು ದೃಢಗೊಂಡವರಿಗೆ ತಕ್ಷಣಕ್ಕೆ ಹೋಮ್ ಐಸೋಲೇಷನ್ ಆಗುವಂತೆ ಸಲಹೆ ನೀಡಲಾಗುತ್ತಿದೆ. ಜೊತೆಗೆ ಅವಶ್ಯಕತೆ ಇದ್ದವರಿಗೆ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗುತ್ತಿದೆ. ಅನೇಕ ರೋಗಿಗಳು ಮನೆಯಲ್ಲಿ ಪ್ರತ್ಯೇಕವಾಗಿರುವ ಮೂಲಕ ಗುಣಮುಖರಾಗುತ್ತಿದ್ದಾರೆ. ಸಾಂಕ್ರಾಮಿಕತೆ ಬಳಿಕ ಅನೇಕ ಮಂದಿ ಕೂಡ ಇದೀಗ ಆನ್ಲೈನ್ ಮೂಲಕವೇ ವೈದ್ಯಕೀಯ ಸಮಾಲೋಚನೆ ಪಡೆಯುತ್ತಿದ್ದಾರೆ. ಸದ್ಯ ಬಿಎಲ್ಕೆ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿಯನ್ನು ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕ್ಯಾನ್ಸರ್, ಶ್ವಾಸಕೋಶ ಮತ್ತು ಹೃದಯ ಸಮಸ್ಯೆಯಂತಹ ಅಪಾಯ ಹೊಂದಿರುವ ಮಂದಿಗೆ ಬೇಗ ಸೋಂಕು ತಗುಲುತ್ತದೆ. ಸೋಂಕಿತರು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಾಗುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.