‘ಬ್ರೈನ್ ಟ್ಯೂಮರ್’ ರೋಗಿಗಳಿಗೆ ಹಾಗೂ ಚಿಕಿತ್ಸೆ ನೀಡುವ ವೈದ್ಯರಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಭಾರತದಲ್ಲಿ ಪ್ರತಿ ವರ್ಷ 50 ಸಾವಿರಕ್ಕೂ ಹೆಚ್ಚು ಜನರಿಗೆ ಬ್ರೈನ್ ಟ್ಯೂಮರ್ (ಮೆದುಳಿಗೆ ತಗುಲುವ ಕಾಯಿಲೆ) ತಗುಲಿರುತ್ತದೆ ಎಂದು ವರದಿಯಾಗಿದೆ. ಅದರಲ್ಲೂ ಹೆಚ್ಚಾಗಿ ಕ್ಯಾನ್ಸರ್ಗೆ ತುತ್ತಾಗಿರುವವರೇ ಹೆಚ್ಚು. ಮೆದುಳಿನಲ್ಲಿ ಗೆಡ್ಡೆಗಳು ಬೆಳೆಯುವ ವೇಳೆ ಯಾವುದೇ ರೋಗಲಕ್ಷಣಗಳು ಕಂಡು ಬರುವುದಿಲ್ಲ. ರೋಗ ಅಪಾಯಮಟ್ಟ ಮೀರಿ ವ್ಯಾಪಿಸಿದಾಗ ಮಾತ್ರ ನಮಗೆ ಈ ಬಗ್ಗೆ ತಿಳಿಯುತ್ತದೆ.
ಜಪಾನ್‌ನ ನಾಗೋಯಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ, ಮೂತ್ರದಲ್ಲಿನ ಮೈಕ್ರೊ ಆರ್‌ಎನ್‌ಎಗಳು ಮೆದುಳಿನ ಗಡ್ಡೆಗಳನ್ನು ಪತ್ತೆಹಚ್ಚಲು ಸಹಕಾರಿಯಾಗಲಿವೆ ಎಂದು ಬಹಿರಂಗಪಡಿಸಿದೆ. ನಿಯಮಿತವಾಗಿ ಮೂತ್ರ ಪರೀಕ್ಷೆ ಮಾಡುವುದರಿಂದ ಮೆದುಳಿನ ಗಡ್ಡೆಗಳ ಆರಂಭಿಕ ಪತ್ತೆ ಮತ್ತು ಚಿಕಿತ್ಸೆಗೆ ಸಹಾಯ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಮೈಕ್ರೋ ಆರ್ಎನ್ಎ ಜೀವಕೋಶದ ಸೈಟೋಪ್ಲಾಸಂನಲ್ಲಿ ಆರ್ಎನ್ಎ ಜತೆ ಸಂಧಿಸುವ ಮೂಲಕ ಜೀನ್ ಅಭಿವ್ಯಕ್ತಿಯನ್ನು ನಿಯಂತ್ರಿಸುತ್ತದೆ.
ಮೊದಲಿಗೆ ವ್ಯಕ್ತಿಯಲ್ಲಿ ಬ್ರೈನ್ ಟ್ಯೂಮರ್ ಪತ್ತೆ ಹಚ್ಚುವುದು ತುಂಬಾ ಕಷ್ಟಕರ. ಯಾಕೆಂದರೆ ತಲೆಗೆ ಗಾಯ, ಅಂಗಾಂಗಗಳ ಅಸ್ಥಿರತೆ ಸೇರಿ ಇತರ ರೋಗ ಲಕ್ಷಣಗಳಿಲ್ಲದೆ ಯಾರೊಬ್ಬರೂ ಮೆದುಳಿನ CT ಅಥವಾ MRI ಸ್ಕ್ಯಾನ್ ಮಾಡಿಸುವುದಿಲ್ಲ. CT ಅಥವಾ MRI ಯಿಂದ ಮಾತ್ರ ರೋಗ ಪತ್ತೆಯಾಗುವುದು. ಆ ವೇಳೆಗೆ ಈ ಕಾಯಿಲೆ ವ್ಯಾಪಿಸಿರುತ್ತದೆ.
ಕ್ಯಾನ್ಸರ್ ಗಡ್ಡೆಗಳ ರೋಗನಿರ್ಣಯದ ಬಯೋಮಾರ್ಕರ್ ಆಗಿ, ಮೈಕ್ರೋ ಆರ್‌ಎನ್‌ಎಗಳು (ರಿಬೊನ್ಯೂಕ್ಲಿಯಿಕ್ ಆಮ್ಲದ ಸಣ್ಣ ಅಣುಗಳು) ಇತ್ತೀಚೆಗೆ ಸಾಕಷ್ಟು ಗಮನ ಸೆಳೆದಿವೆ. ಮೈಕ್ರೊ ಆರ್‌ಎನ್‌ಎಗಳನ್ನು ವಿವಿಧ ಕೋಶಗಳಿಂದ ಸ್ರವಿಸಲಾಗುತ್ತದೆ. ರಕ್ತ ಮತ್ತು ಮೂತ್ರದಂತಹ ಜೈವಿಕ ದ್ರವಗಳಲ್ಲಿ ಸ್ಥಿರ ಮತ್ತು ಹಾನಿಯಾಗದ ಸ್ಥಿತಿಯಲ್ಲಿರುತ್ತವೆ. ಈ ರೋಗಿಗಳಿಗೆ ಮೂತ್ರ ಆಧಾರಿತ ದ್ರವ ಬಯಾಪ್ಸಿಯನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗಿಲ್ಲ. ಏಕೆಂದರೆ ಯಾವುದೇ ಸಾಂಪ್ರದಾಯಿಕ ವಿಧಾನಗಳು ಮೈಕ್ರೊಆರ್‌ಎನ್‌ಎಗಳನ್ನು ಮೂತ್ರದಿಂದ ಹೊರತೆಗೆಯಲು ಸಾಧ್ಯವಿಲ್ಲ.