ಹೈದರಾಬಾದ್:ಚಾಲಕರು ಮಾಡುವ ಸಣ್ಣ ತಪ್ಪುಗಳಿಂದಾಗಿ ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತದ ಸಂಖ್ಯೆ ಏರಿಕೆ ಕಾಣುತ್ತಿದೆ. ರಸ್ತೆಯಲ್ಲಿ ಪಯಣ ಮಾಡುವ ವೇಳೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದರಿಂದ ಈ ಅಪಘಾತಗಳನ್ನು ಕಡಿಮೆ ಮಾಡಬಹುದು. ರಸ್ತೆ ಪ್ರಯಾಣದ ವೇಳೆ ಈ ಐದು ತಪ್ಪುಗಳನ್ನು ಮಾಡದಿರುವುದರಿಂದ ನಿಮ್ಮ ಪ್ರಯಾಣ ಸುಖಕರವಾಗುತ್ತದೆ.
ಹಳದಿ ಲೈಟ್ಬಂದಾಗ ವೇಗ ಬೇಡ..ಬಹುತೇಕ ಮಂದಿ ಹಳದಿ ಲೈಟ್ ಬಂದಾಕ್ಷಣ ಆಕ್ಸಲೇಟರ್ ಅನ್ನು ಜೋರು ಮಾಡಿ ದಾಟಲು ಪ್ರಯತ್ನಿಸುತ್ತಾರೆ. ಆದರೆ, ಹಳದಿ ಲೈಟ್ ಬಂದಾಕ್ಷಣ ಆಕ್ಸಿಲೇಟರ್ ನಿಧಾನಗೊಳಿಸಬೇಕು. ಹಳದಿ ಲೈಟ್ ಕೆಂಪು ಲೈಟ್ ಬರುವ ಸೂಚನೆ ನೀಡುವ ಹಿನ್ನೆಲೆ ತಕ್ಷಣಕ್ಕೆ ಸವಾರರು ಮುಂಜಾಗ್ರತೆ ವಹಿಸುವುದರಿಂದ ನಿಮಗೂ ಹಾಗೂ ನಿಮ್ಮ ಹತ್ತಿರದ ಇತರ ವಾಹನಗಳನ್ನು ಅಪಾಯದಿಂದ ತಪ್ಪಿಸಬಹುದಾಗಿದೆ.
ಕರೆ ಸ್ವೀಕಾರ ಬೇಡ..ಎಷ್ಟೇ ಅಗತ್ಯವಿದ್ದರೂ ವಾಹನ ಚಾಲನೆ ವೇಳೆ ಮೊಬೈಲ್ ಕರೆಗಳನ್ನು ಸ್ವೀಕರಿಸಬೇಡಿ. ಇದು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವುದಲ್ಲದೇ, ನಿಮ್ಮ ಡ್ರೈವಿಂಗ್ ಟೆಕ್ನಿಕ್ ಟ್ರ್ಯಾಕ್ ಮರೆತು ಅಪಘಾತಕ್ಕೆ ಕಾರಣವಾಗಬಹುದು.
ಸೈಡ್ ಮಿರರ್ ಬಗ್ಗೆ ನಿರ್ಲಕ್ಷ್ಯ ಬೇಡ..ವಾಹನ ಚಾಲನೆ ವೇಳೆ ಮುಂದೆ ಗಮನಿಸುವಷ್ಟೇ ಅಕ್ಕ-ಪಕ್ಕ ಮತ್ತು ಹಿಂಭಾಗದ ಬಗ್ಗೆ ಕೂಡ ಗಮನವನ್ನು ಹೊಂದಿರಬೇಕು. ನಿಮ್ಮ ವಾಹನದ ಪಕ್ಕದಲ್ಲಿ ಅಥವಾ ಹಿಂದೆ ಯಾವ ವಾಹನಗಳು ಬರುತ್ತವೆ ಎಂಬುದನ್ನು ಸೈಡ್ ಮಿರರ್ ಮೂಲಕ ಅರಿಯಬಹುದು. ಇದರಿಂದ ನಿಮ್ಮ ಟ್ರ್ಯಾಕ್ನಲ್ಲಿ ನೀವು ಸುರಕ್ಷಿತವಾಗಿ ಹೋಗಬಹುದು.
ಇಂಡಿಕೇಟರ್ ಇಲ್ಲದೆ ವಾಹನ ತಿರುಗಿಸಬೇಡಿ..ರಸ್ತೆಯಲ್ಲಿ ಕೆಲವೊಮ್ಮೆ ತಿರುವುಗಳನ್ನು ಪಡೆಯುವುದು ಸಾಮಾನ್ಯ. ಆದರೆ, ಈ ತಿರುವು ನೀಡುವ ಮುನ್ನ ನಿಮ್ಮ ಹಿಂದಿನ ವಾಹನ ಸವಾರರ ಸುರಕ್ಷಿತ ಪಯಣಕ್ಕೆ ಅನುಕೂಲವಾಗುವಂತೆ ಇಂಡಿಕೇಟರ್ ಬಳಸಿ. ಏಕಾಏಕಿ ನೀವು ತಿರುವ ತೆಗೆದುಕೊಂಡರೆ ಹಿಂದಿನ ವಾಹನಗಳ ನಡುವೆ ಸರಣಿ ಅಪಘಾತವಾಗುವ ಸಾಧ್ಯತೆ ಕೂಡ ಕಡಿಮೆ ಇಲ್ಲ.
ಬ್ರೇಕ್ ಜೊತೆ ಆಕ್ಸಿಲೇಟರ್ ಬೇಡ..ರಸ್ತೆ ಪಯಣದ ವೇಳೆ ಒಂದು ಕಾಲು ಆಕ್ಸಿಲೇಟರ್ ಮತ್ತೊಂದು ಬ್ರೇಕ್ ಮೇಲೆ ಇರುವುದು ಸಾಮಾನ್ಯ. ಆದರೆ ಇವೆರಡನ್ನು ಏಕಕಾಲದಲ್ಲಿ ಒಟ್ಟಿಗೆ ತುಳಿಯುವುದರಿಂದ ನಿಮ್ಮ ವಾಹನ ಜರ್ಕ್ ಆಗುವ ಸಾಧ್ಯತೆ ಇದೆ. ಒಂದೇ ಸಲ ನೀವು ಬ್ರೇಕ್ ಒತ್ತಿದಾಗ ಹಿಂದಿನ ಸವಾರರಿಗೂ ಕೂಡ ಕಷ್ಟವಾಗುತ್ತದೆ. ಕಾರನ್ನು ಏಕಾಏಕಿ ನಿಲ್ಲಿಸುವುದು ಸರಣಿ ಅಪಘಾತಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ರೇಸಿಂಗ್ ಕಾರು ತಯಾರಿಸಿದ ಮದ್ರಾಸ್ ಐಐಟಿ ವಿದ್ಯಾರ್ಥಿಗಳು