ಕರ್ನಾಟಕ

karnataka

ETV Bharat / sukhibhava

ಒಮಿಕ್ರಾನ್ ಬಿಎಫ್.7 : ಜಾಗ್ರತೆ ವಹಿಸಿ.. ಮುನ್ನೆಚ್ಚರಿಕೆ ಮರೆಯದಿರಿ

ಒಮಿಕ್ರಾನ್ ವೈರಸ್​ನ ಉಪ ವೆರಿಯಂಟ್​ BF.7- ಜಾಗ್ರತೆ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ- ವೈದ್ಯರ ಸೂಚನೆ

coronavirus
ಒಮಿಕ್ರಾನ್ ವೈರಸ್

By

Published : Dec 24, 2022, 5:22 PM IST

ಹೈದರಾಬಾದ್: ಕೊರೊನಾ BF.7 ರೂಪಾಂತರವು ಒಮಿಕ್ರಾನ್ ವೈರಸ್​ನ ಉಪ ರೂಪಾಂತರಿ​ ಆಗಿದೆ. ಇದು ಹರಡುವ ವೇಗವನ್ನು ಗಮನಿಸಿ ದೇಶದಲ್ಲಿ ತಡೆಯುವ ಪ್ರಯತ್ನ ಈಗಾಗಲೇ ಪ್ರಾರಂಭವಾಗಿದೆ. ಇದಕ್ಕೆ ಸಂಬಂಧಿಸಿದಂತೆ ವೈದ್ಯರು ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಿಗೆ ಅಗತ್ಯವಿರುವ ಸಲಹೆ ಮತ್ತು ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ನೀಡಿದ್ದಾರೆ. ಅವುಗಳು ಇಂತಿವೆ.

ದೇಶದಲ್ಲಿ ಕೋವಿಡ್-19 ಪ್ರಕರಣಗಳು ಪ್ರಸ್ತುತ ಆತಂಕಕಾರಿಯಾಗಿಲ್ಲ. ಅಲ್ಲದೇ ಚೇತರಿಸಿಕೊಳ್ಳುವ ರೋಗಿಗಳ ವೇಗ ಮತ್ತು ಶೇಕಡಾವಾರು ಪ್ರಮಾಣವು ತುಂಬಾ ಹೆಚ್ಚಿದೆ. ಆದರೆ ಚೀನಾದ ಕೋವಿಡ್​ ಪರಿಸ್ಥಿತಿಯು ಭಾರತವನ್ನು ಮಾತ್ರವಲ್ಲದೆ ಇತರೆ ದೇಶಗಳನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರವು ಸೋಂಕು ಪ್ರಾರಂಭವಾಗುವ ಮುನ್ನವೇ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಜನರಿಗೆ ಸಲಹೆ ನೀಡುತ್ತಿದೆ.

BF.7 ಜನರಿಗೆ ಪರಿಸ್ಥಿತಿಯನ್ನು ಕಷ್ಟಕರವಾಗಿಸುತ್ತದೆ.. ಕೊರೊನಾ ಸೋಂಕಿನ ಪ್ರಾರಂಭದಿಂದಲೂ, ಅದರ ಮೂಲ ವೈರಸ್ SARS-COV-2 ನಲ್ಲಿ ನಿರಂತರ ರೂಪಾಂತರಗಳನ್ನು ಗಮನಿಸಲಾಗಿದೆ. ಅವುಗಳಲ್ಲಿ ವಿವಿಧ ರೂಪಾಂತರ ಪ್ರಕರಣಗಳು ವರದಿಯಾಗಿವೆ. ಹೆಚ್ಚಿನ ಜನರು ಡೆಲ್ಟಾ, ಡೆಲ್ಟಾ ಪ್ಲಸ್, ಕಪ್ಪಾ ಮತ್ತು ಒಮಿಕ್ರಾನ್​ ಸೋಂಕಿಗೆ ಒಳಗಾಗಿದ್ದಾರೆ. ಈ ವೈರಸ್​ನ ಹೆಚ್ಚಿನ ರೂಪಾಂತರಗಳು ಪ್ರಪಂಚದ ವಿವಿಧ ಕಡೆಗಳಲ್ಲಿ ಕಂಡುಬಂದಿವೆ.

ವೈರಾಲಜಿಸ್ಟ್‌ಗಳು ಅಥವಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ, ರೂಪಾಂತರವು ಕೋವಿಡ್ ವೈರಸ್‌ನ ಪ್ರವೃತ್ತಿಯಾಗಿದೆ ಮತ್ತು ಇದು ಅನೇಕ ರೀತಿಯ ಸಂಶೋಧನೆಗಳಲ್ಲಿ ದೃಢೀಕರಿಸಲ್ಪಟ್ಟಿದೆ. ಆದರೆ ಕೋವಿಡ್​ 19ರ ಎಲ್ಲಾ ರೂಪಾಂತರಗಳ ನಡುವೆ ಈ ಒಮಿಕ್ರಾನ್​ ಉಪ ರೂಪವಾದ BF.7 ಜನರಿಗೆ ಪರಿಸ್ಥಿತಿಯನ್ನು ಕಷ್ಟಕರವಾಗಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಒಮಿಕ್ರಾನ್​ BA.5 ಉಪ ವಂಶಾವಳಿಯಾದ BF. 7 ಅತ್ಯಂತ ವೇಗವಾಗಿ ಹರಡುವ ಉಪ-ರೂಪಾಂತರವಾಗಿದೆ. ಇದು ಹೆಚ್ಚಿನ ತಟಸ್ಥೀಕರಣ ಪ್ರತಿರೋಧವನ್ನು ಹೊಂದಿದೆ. ಅಂದರೆ ಜನಸಂಖ್ಯೆಯಲ್ಲಿ ಇದರ ಹರಡುವಿಕೆಯ ವೇಗವು ಇತರ ರೂಪಾಂತರಗಳಿಗಿಂತ ಹೆಚ್ಚು ಎಂದು ಕೆಲವು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಆರೋಗ್ಯವಂತ ವ್ಯಕ್ತಿಯಲ್ಲಿ ಇದರ ಪರಿಣಾಮಗಳು ತುಂಬಾ ಗಂಭೀರವಾಗಿಲ್ಲ ಎಂದು ನಂಬಲಾಗಿದೆ. ಆದರೆ ವೈರಸ್​ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯ ಸಂಪರ್ಕದಿಂದ ಹರಡುವ ಸಾಧ್ಯತೆಯು ಹೆಚ್ಚಿದೆ. ಮಾತ್ರವಲ್ಲದೆ ಜನರೂ ಲಸಿಕೆ ಹಾಕಿಸಿಕೊಂಡರೂ ಅಥವಾ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದ್ದರೂ ಸುಲಭವಾಗಿ ಪರಿಣಾಮ ಬೀರಬಹುದಾಗಿದೆ.

ಡಬ್ಲೂಹೆಚ್​ಒ ಪ್ರಕಾರ, ಈ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯು 10 ರಿಂದ 18 ಜನರಿಗೆ ಸೋಂಕು ತಗುಲಿಸಬಹುದು ಮತ್ತು BF.7 ರೂಪಾಂತರವು ಕೋವಿಡ್​-19ನ ಎಲ್ಲಾ ರೂಪಾಂತರಗಳಿಗಿಂತ ಅತ್ಯಂತ ವೇಗವಾಗಿ ಹರಡುವುದರಿಂದ ಹೆಚ್ಚು ಅಪಾಯಕಾರಿಯಾಗಿದೆ.

ರೋಗಲಕ್ಷಣಗಳು:

  • ಚಳಿ ಜ್ವರ
  • ಶ್ವಾಸನಾಳದ ಮೇಲ್ಭಾಗದಲ್ಲಿ ನೋವು ಮತ್ತು ಬಿಗಿತ
  • ಕೆಮ್ಮು(ಕೆಲವೊಮ್ಮೆ ಕಫದೊಂದಿಗೆ)
  • ಮೂಗು ಮತ್ತು ಗಂಟಲು ನೋವು
  • ವಾಂತಿ ಮತ್ತು ಭೇದಿ
  • ಉಸಿರಾಟದ ತೊಂದರೆಗಳು
  • ಮಾತನಾಡುವಾಗ ತೊದಲುವುದು
  • ತಲೆನೋವು ಮತ್ತು ಸ್ನಾಯು ನೋವು
  • ವಾಸನೆ ಗ್ರಹಿಕೆ ನಷ್ಟ

ಮಧ್ಯಪ್ರದೇಶದ ಮಕ್ಕಳ ತಜ್ಞೆ ಡಾ.ಸೋನಾಲಿ ನವಲೆ ಪುರಂದರೆ ಅವರ ಪ್ರಕಾರ, ಪ್ರತಿಯೊಂದು ದೇಶದಲ್ಲಿನ ಜನರ ಆಹಾರ ಪದ್ಧತಿ ವಿಭಿನ್ನವಾಗಿರುವುದರಿಂದ ಅವರ ದೈಹಿಕ ಮತ್ತು ಆರೋಗ್ಯ ಸ್ಥಿತಿಗಳು ಕೂಡ ವಿಭಿನ್ನವಾಗಿರುತ್ತವೆ. ಹೀಗಾಗಿ BF.7 ಭಾರತೀಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲದೇ ಕೋವಿಡ್​ನಿಂದ ಚೇತರಿಸಿಕೊಳ್ಳುವವರ ಪ್ರಮಾಣವು ನಮ್ಮ ದೇಶದಲ್ಲಿ ಉತ್ತಮವಾಗಿದೆ. ಕೋವಿಡ್-19 ರ ಎರಡು ಲಸಿಕೆಗಳನ್ನು ತೆಗೆದುಕೊಂಡ ನಂತರ, ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ BF.7 ಬಗ್ಗೆ ನಾವು ಜಾಗರೂಕರಾಗಿರಬೇಕು. ಇಂದಿನಿಂದ ನಮ್ಮ ದೈನಂದಿನ ದಿನಚರಿಯಲ್ಲಿ ಸುರಕ್ಷತಾ ಮಾರ್ಗಸೂಚಿಗಳನ್ನು ಸೇರಿಸುವುದು ಬಹಳ ಮುಖ್ಯ.

ಜನಸಂದಣಿ ಹೆಚ್ಚಿರುವ ಕಡೆ ಮಾಸ್ಕ್ ಧರಿಸುವುದು, ಕೈಗಳ ನೈರ್ಮಲ್ಯವನ್ನು ಕಾಪಾಡುವುದು ಮತ್ತು ಹೆಚ್ಚು ಜನ ಸೇರುವಲ್ಲಿಗೆ ಹೋಗದಿರುವುದು ಇಂತಹ ಮಾರ್ಗಸೂಚಿಗಳನ್ನು ಮತ್ತೊಮ್ಮೆ ಅಳವಡಿಸಿಕೊಳ್ಳುವುದು ಪ್ರಯೋಜನಕಾರಿ. ಇದರೊಂದಿಗೆ ನಿಮ್ಮ ಆಹಾರ ಪದ್ಧತಿ ಮತ್ತು ದಿನಚರಿಯನ್ನು ಆರೋಗ್ಯಕರವಾಗಿ ಮತ್ತು ಸಕ್ರಿಯವಾಗಿ ಇಟ್ಟುಕೊಳ್ಳಿ. ರೋಗ ನಿರೋಧಕ ಶಕ್ತಿ ಹೆಚ್ಚು ಇದ್ದಲ್ಲಿ ಯಾವುದೇ ಸೋಂಕು ಪರಿಣಾಮ ಬೀರುವುದಿಲ್ಲ ಎಂದು ಡಾ. ಸೋನಾಲಿ ಸಲಹೆ ನೀಡಿದರು.

ಇದನ್ನೂ ಓದಿ:ಒಮಿಕ್ರಾನ್ ಬಿಎಫ್ 7 ತಡೆಗೆ ಭಾರತ ಸಶಕ್ತ ..ವಿಮಾನಯಾನ ನಿರ್ಬಂಧ,ಲಾಕ್​ಡೌನ್ ಹೇರುವ ಅಗತ್ಯವಿಲ್ಲ: ತಜ್ಞರ ಅಭಿಮತ

ABOUT THE AUTHOR

...view details