ಹೈದರಾಬಾದ್ :ಗರ್ಭಿಣಿಯರು ಮಗು ಹುಟ್ಟಿದ ಬಳಿಕ ಕೋವಿಡ್-19 ಲಸಿಕೆ ಪಡೆಯಲು ಕಾಯುತ್ತಿದ್ದರಾ? ಆದರೆ, ಹೊಸ ಅಧ್ಯಯನದ ಪ್ರಕಾರ, ತಮ್ಮ ಮೂರನೇ ತ್ರೈಮಾಸಿಕದ ಆರಂಭದಲ್ಲಿ (ಅಂದರೆ 7ನೇ ತಿಂಗಳ ಆರಂಭದಲ್ಲಿ) ಕೊರೊನಾ ಲಸಿಕೆ ಪಡೆಯುವ ತಾಯಂದಿರು ತಮ್ಮ ನವಜಾತ ಶಿಶುಗಳಿಗೆ ರಕ್ಷಣಾತ್ಮಕ ಪ್ರತಿಕಾಯಗಳನ್ನು ರವಾನಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಅಮೆರಿಕನ್ ಜರ್ನಲ್ ಆಫ್ ಅಬ್ಸ್ಟೆಟ್ರಿಕ್ಸ್ ಅಂಡ್ ಗೈನೆಕಾಲಜಿಯಲ್ಲಿ ಪ್ರಕಟವಾದ ಈ ಸಣ್ಣ ಅಧ್ಯಯನವು, ತಮ್ಮ ಮೂರನೇ ತ್ರೈಮಾಸಿಕದಲ್ಲಿ ಫೈಜರ್ ಅಥವಾ ಮಾಡೆರ್ನಾ ಲಸಿಕೆ ಪಡೆದ 27 ಗರ್ಭಿಣಿಯರ ರಕ್ತ ಮತ್ತು ಅವರ ನವಜಾತ ಶಿಶುಗಳ ಹೊಕ್ಕುಳಬಳ್ಳಿಯ ರಕ್ತ ವಿಶ್ಲೇಷಿಸಿದೆ.
ವ್ಯಾಕ್ಸಿನೇಷನ್ ಪಡೆದ ನಂತರ ಮಹಿಳೆಯರು ಈ ರೋಗನಿರೋಧಕ ಶಕ್ತಿಯನ್ನು ಮಕ್ಕಳಿಗೂ ರವಾನಿಸುತ್ತಾರೆ ಎಂದು ಅಮೆರಿಕಾದ ಇಲಿನಾಯ್ಸ್‌ನ ನಾರ್ತ್‌ವೆಸ್ಟರ್ನ್ ಮೆಡಿಸಿನ್‌ನ ಸಂಶೋಧಕರು ಹೇಳಿದ್ದಾರೆ.
ಅಧ್ಯಯನಕ್ಕೆ ಒಳಪಡಿಸಿದ ಕೇವಲ ಮೂರು ಶಿಶುಗಳು ಜನನದ ಸಮಯದಲ್ಲಿ ಸಕಾರಾತ್ಮಕ ಪ್ರತಿಕಾಯಗಳನ್ನು ಹೊಂದಿರಲಿಲ್ಲ ಮತ್ತು ಆ ಮಕ್ಕಳ ತಾಯಂದಿರು ತಮ್ಮ ಮೂರನೇ ತ್ರೈಮಾಸಿಕದ ಆರಂಭದಲ್ಲಿ ಲಸಿಕೆ ಪಡೆದಿರಲಿಲ್ಲ, ಮೂರನೇ ತ್ರೈಮಾಸಿಕದ ಅಂತ್ಯದಲ್ಲಿ (ಅಂದರೆ 9ನೇ ತಿಂಗಳಿನಲ್ಲಿ) ಲಸಿಕೆ ಪಡೆದಿದ್ದರು.
ಮಗುವಿಗೆ ಜನ್ಮ ನೀಡುವ ಮೊದಲು ಲಸಿಕೆಯ ಎರಡೂ ಡೋಸ್ ಪಡೆದ ಮಹಿಳೆಯರು ತಮ್ಮ ಮಗುವಿಗೆ ಪ್ರತಿಕಾಯಗಳನ್ನು ವರ್ಗಾಯಿಸುತ್ತಾರೆ ಎಂದು ಅಧ್ಯಯನವು ಕಂಡು ಹಿಡಿದಿದೆ. "ಗರ್ಭಿಣಿಯಾಗಿದ್ದಾಗ ಲಸಿಕೆ ಪಡೆಯಬೇಕೆಂದು ನಾವು ಬಲವಾಗಿ ಶಿಫಾರಸು ಮಾಡುತ್ತೇವೆ.
ಆದರೆ, ವ್ಯಾಕ್ಸಿನೇಷನ್ ಮಗುವಿಗೆ ಹಾನಿಯಾಗಬಹುದೆಂದು ನೀವು ಭಯಪಡುತ್ತಿದ್ದರೆ, ಈ ಡೇಟಾವು ಇದಕ್ಕೆ ತದ್ವಿರುದ್ಧವಾಗಿದೆ ಎಂದು ಹೇಳುತ್ತದೆ. ಲಸಿಕೆ ನಿಮ್ಮ ಮಗುವನ್ನು ರಕ್ಷಿಸುವ ಕಾರ್ಯವಿಧಾನವಾಗಿದೆ ಮತ್ತು ನೀವು ಬೇಗನೆ ಅದನ್ನು ಪಡೆದುಕೊಂಡರೆ ಉತ್ತಮ" ಎಂದು ಅಧ್ಯಯನ ತಿಳಿಸಿದೆ.
ಗರ್ಭಧಾರಣೆಯ ಆರಂಭಿಕ ತಿಂಗಳುಗಳಲ್ಲಿಯೂ ಲಸಿಕೆ ಸ್ವೀಕರಿಸಿದರೆ (ಅಂದರೆ ಮೊದಲನೇ ಅಥವಾ ಎರಡನೇ ತ್ರೈಮಾಸಿಕ ಅಥವಾ 1ರಿಂದ 6 ತಿಂಗಳು) ಪ್ರತಿಕಾಯ ವರ್ಗಾವಣೆ ಸಾಧ್ಯತೆಯಿದೆ. ಹೆರಿಗೆಯ ನಂತರ ಶಿಶುಗಳನ್ನು ರಕ್ಷಿಸಲು ವರ್ಗಾವಣೆಗೊಂಡ ಪ್ರತಿಕಾಯಗಳು ಎಷ್ಟು ಚೆನ್ನಾಗಿ ಅಥವಾ ಎಷ್ಟು ಸಮಯದವರೆಗೆ ಮುಂದುವರಿಯುತ್ತದೆ ಎಂಬುದರ ಕುರಿತು ಕೂಡ ಅಧ್ಯಯನ ನಡೆಯುತ್ತಿದೆ.