ಯಾದಗಿರಿ:ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಮತ್ತೆ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿರುವ ಹಿನ್ನೆಲೆ, ನದಿ ತೀರದ ಗ್ರಾಮಗಳಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.
ಬಸವಸಾಗರ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ! ಇಂದು ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯಿರುವ ಬಸವಸಾಗರ ಜಲಾಶಯದಿಂದ 22 ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ 2 ಲಕ್ಷದ 37 ಸಾವಿರ 220 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ನದಿ ಪಾತ್ರದ ಜನರಿಗೆ ಮತ್ತೆ ಪ್ರವಾಹ ಆತಂಕ ಎದುರಾಗಿದೆ. ಬಸವಸಾಗರ ಜಲಾಶಯ 33.313 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಈಗಾಗಲೇ 29.15 ಟಿಎಂಸಿ ಸಂಗ್ರಹವಾಗಿದೆ.
ಈಗಾಗಲೇ ಜಲಾಶಯದಲ್ಲಿ 1 ಲಕ್ಷದ 90 ಸಾವಿರ ಕ್ಯುಸೆಕ್ ಒಳ ಹರಿವುವಿದ್ದು, ನದಿಗೆ 2 ಲಕ್ಷ 30 ಸಾವಿರದ 220 ಕ್ಯುಸೆಕ್ ನೀರು ಬಿಡಲಾಗಿದೆ. ನದಿಯಲ್ಲಿ ಹೆಚ್ಚಾದ ನೀರಿನ ಪ್ರಮಾಣದಿಂದ ನಾರಾಯಣಪುರದ ಬಳಿಯಿರುವ ಛಾಯಾ ಭಗವತಿ ದೇವಸ್ಥಾನ ಸೇರಿದಂತೆ ಶಹಪುರ ತಾಲೂಕಿನ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೊಳ್ಳೂರ ಸೇತುವೆ ಮುಳುಗುವ ಭೀತಿ ಎದುರಾಗಿದೆ.
ಪ್ರವಾಹ ಭೀತಿ ಎದುರಿಸಲು ಜಿಲ್ಲಾಡಳಿತ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ನದಿ ತೀರಕ್ಕೆ ಜನ, ಜಾನುವಾರುಗಳು ತೆರಳದಂತೆ ಸೂಚನೆ ನೀಡಿದೆ.