ಸುರಪುರ: ರಸ್ತೆ ಬದಿಯಲ್ಲಿ ಒಣಗುತ್ತಿರುವ ಗಿಡಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ನೀರುಣಿಸುವ ಕೆಲಸ ನೀಡುವಂತೆ ಕಾರ್ಮಿಕರು ಒತ್ತಾಯಿಸಿದ್ದಾರೆ.
2019-20ರಲ್ಲಿ ತಾಲೂಕಿನ ವಾಗಣಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಬಾವಿ ರಸ್ತೆಯ ಎರಡೂ ಬದಿಗಳಲ್ಲಿ ಬೇವಿನ ಮರ, ಹೊನ್ನೆ, ಮತ್ತಿ ಸೇರಿದಂತೆ ವಿವಿಧ ಜಾತಿಯ 200ಕ್ಕೂ ಹೆಚ್ಚಿನ ಗಿಡಗಳನ್ನು ನೆಡಲಾಗಿದೆ.
ನೀರಿಲ್ಲದ ಪರಿಣಾಮ ಗಿಡಗಳು ಸಾವು - ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ವನಸಿರಿ ಮರ ಬೆಳೆಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಲಕ್ಷಾಂತರ ರೂಪಾಯಿ ವ್ಯಯಿಸಲಾಗಿದೆ. ಹೀಗಾಗಿ, ಅವುಗಳಿಗೆ ನೀರುಣಿಸಲು ಕಾರ್ಮಿಕರು ಕೆಲಸ ನೀಡುವಂತೆ ಮನವಿ ಮಾಡಿದ್ದಾರೆ.
ಕೊರೊನಾ ಕಾಟದಿಂದ ರಾಜ್ಯಾದ್ಯಂತ ಕಾರ್ಮಿಕರು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಗಿಡಗಳಿಗೆ ನೀರುಣಿಸುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ ಕೆಲಸ ನೀಡಿದಲ್ಲಿ ಕಾರ್ಮಿಕರ ಜೀವನೋಪಾಯಕ್ಕೆ ಆಸರೆ ಜೊತೆಗೆ ಗಿಡಗಳನ್ನು ಬೆಳೆಸಿಂತಾಗಲಿದೆ.