ಸುರಪುರ (ಯಾದಗಿರಿ): ಸುರಪುರ ತಾಲೂಕಿನ ಬೈಚಬಾಳ ಗ್ರಾಮ ಸಮಸ್ಯೆಗಳ ಆಗರವಾಗಿದೆ. ಗ್ರಾಮ ಪಂಚಾಯಿತಿ ಇದ್ದೂ ಇಲ್ಲದಂತಾಗಿರುವ ಪಿಡಿಒ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿನ ರಸ್ತೆಗಳಲ್ಲಿ ಹೂಳು ತುಂಬಿದ ಪರಿಣಾಮ ಜನರು ಕೊಚ್ಚೆಯಲ್ಲಿಯೇ ನಡೆದಾಡಬೇಕಾಗಿದೆ. ಗ್ರಾಮದಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ. ಅನೇಕ ವರ್ಷಗಳ ಹಿಂದೆ ಕಟ್ಟಿದ ಟ್ಯಾಂಕ್ ನೀರನ್ನೆ ಜನರು ಕುಡಿಯಲು ಬಳಲುತ್ತಿದ್ದಾರೆ. ಆದರೆ ಈ ಟ್ಯಾಂಕ್ ಇರುವ ಸ್ಥಳವನ್ನು ನೋಡಿದಲ್ಲಿ ಜನರಿಗೆ ವಾಕರಿಕೆಯಾಗುವುದರಲ್ಲಿ ಅನುಮಾನವಿಲ್ಲ.
ಸಮಸ್ಯೆಗಳ ಆಗರ ಬೈಚಬಾಳ ಗ್ರಾಮ ಗ್ರಾಮದಲ್ಲಿ ಸುಮಾರು 6 ನೂರಕ್ಕೂ ಹೆಚ್ಚು ಮನೆಗಳಿದ್ದು, ಶುದ್ಧ ಕುಡಿಯುವ ನೀರಿನ ಘಟಕ ಬಂದಾಗಿ ಅನೇಕ ತಿಂಗಳುಗಳೇ ಕಳೆದಿವೆ. ಆದರೆ ಜನರು ಕುಡಿಯುವ ನೀರಿಗಾಗಿ ಪರದಾಡಬೇಕಾಗಿದೆ. ಇನ್ನು ಗ್ರಾಮದಲ್ಲಿನ ಜನರಿಗೆ ಶೌಚ ದೊಡ್ಡ ಸಮಸ್ಯೆಯ ಸಂಗತಿಯಾಗಿದ್ದು, ಮಹಿಳೆಯರು ರಸ್ತೆ ಬದಿಗಳಲ್ಲಿಯೆ ಬಹಿರ್ದೆಸೆಗೆ ಹೋಗುವುದರಿಂದ ಗ್ರಾಮದ ಮಹಿಳೆಯರು ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಸಮಸ್ಯೆಗಳಿಂದ ರೋಸಿ ಹೋಗಿರುವ ಜನರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಜೊತೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಗ್ರಾಮದಲ್ಲಿನ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವತ್ತ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.