ಸುರಪುರ : ನಗರದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದ್ದು, ಅನೇಕ ರಸ್ತೆಗಳು ಹಾಳಾಗಿ ಜನರು ಓಡಾಡದ ಪರಿಸ್ಥಿತಿ ಉಂಟಾಗಿದೆ.
ಭಾರಿ ಮಳೆಗೆ ಕೊಚ್ಚಿ ಹೋದ ಸುರಪುರದ ರಸ್ತೆಗಳು
ಭಾರಿ ಮಳೆಗೆ ಸುರಪುರ ನಗರದ ರಂಗಂಪೇಟೆಯ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಹಸನಾಪುರ ರಸ್ತೆ ಕೊಚ್ಚಿ ಹೋಗಿದೆ.
ನಗರದ ರಂಗಂಪೇಟೆಯ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಹಸನಾಪುರ ರಸ್ತೆ ರಾತ್ರಿ ಸುರಿದ ಮಳೆಗೆ ಸಂಪೂರ್ಣ ಹಾಳಾಗಿದೆ. ಈ ರಸ್ತೆ ಮೊದಲ ಬಾರಿ ಈ ರೀತಿ ಆಗಿದ್ದಲ್ಲ. ಪ್ರತಿಬಾರಿ ಮಳೆ ಬಂದಾಗಲೂ ರಸ್ತೆ ಕೊಚ್ಚಿ ಹೋಗಿ ಜನರು ಓಡಾಡದಂತೆ ಆಗುತ್ತದೆ. ನಗರಸಭೆಗೆ ಮನವಿ ಮಾಡಿದರೆ ಮಣ್ಣು ಹಾಕಿ ತಾತ್ಕಾಲಿಕ ದುರಸ್ತಿ ಮಾಡಿ ಕೈ ತೊಳೆದುಕೊಳ್ಳುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಸ್ತೆ ಬದಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ರೀತಿ ಅವಾಂತರ ಸೃಷ್ಟಿಯಾಗಲು ಕಾರಣ. ಆದ್ದರಿಂದ ಇನ್ನಾದರೂ ನಗರಸಭೆ ಈ ಬಗ್ಗೆ ಗಮನಹರಿಸಿ ರಸ್ತೆ ಬದಿಯ ಚರಂಡಿ ದುರಸ್ತಿಗೊಳಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕೆಂದು ಜನರು ಆಗ್ರಹಿಸಿದ್ದಾರೆ.