ಯಾದಗಿರಿ :ಜಿಲ್ಲೆಯ ವಡಗೇರಾ ಪಟ್ಟಣದಲ್ಲಿಂದು ಮಾಸ್ಕ್ ಹಾಕದೇ ಸರ್ಕಾರದ ಆದೇಶ ಪಾಲಿಸದೇ ಬೇಕಾಬಿಟ್ಟಿ ತಿರುಗುತ್ತಿರುವವರಿಗೆ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೊಂಕು ದಿನೇ ದಿನೆ ಹೆಚ್ಚುತ್ತಿದ್ದು, ಅದನ್ನು ನಿಯಂತ್ರಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಜನರು ಮಾತ್ರ ಸ್ಪಂದಿಸುತ್ತಿಲ್ಲ. ಅದಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಹಾಗೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ಇಂದು ವಡಗೇರಾ ಪೊಲೀಸ್ ಅಧಿಕಾರಿಗಳಾದ ಎಎಸ್ ಐ ಗಂಗಾಧರ ಪಾಟೀಲ್ ಅವರ ತಂಡ ಪಟ್ಟಣದ ಬಸವೇಶ್ವರ ವೃತ್ತ ಹಾಗೂ ವಾಲ್ಮೀಕಿ ವೃತ್ತದಲ್ಲಿ ಸರ್ಕಾರದ ಆದೇಶ ಗಾಳಿಗೆ ತೂರಿ ಮಾಸ್ಕ್ ಹಾಕದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಜನರಿಗೆ ದಂಡ ವಿಧಿಸಿದರು.
ಜೊತೆಗೆ ವಡಗೇರಾ ಪೊಲೀಸ್ ಇಲಾಖೆಯ ವತಿಯಿಂದ ಉಚಿತವಾಗಿ ಮಾಸ್ಕ್ ವಿತರಿಸಿ, ಕೊರೊನಾ ಸೋಂಕು ತಡೆಯಲು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕಟ್ಟುನಿಟ್ಟಾಗಿ ಸರ್ಕಾರದ ಆದೇಶ ಪಾಲಿಸಬೇಕೆಂದು ಪಟ್ಟಣದ ನಿವಾಸಿಗಳಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಭಗವಂತರಾಯ, ಮಲ್ಲಿಕಾರ್ಜುನ ಪಾಟೀಲ್, ನಿಂಗಾರೆಡ್ಡಿ, ಗೋವಿಂದ ಉಪಸ್ಥಿತರಿದ್ದರು.