ಕರ್ನಾಟಕ

karnataka

ETV Bharat / state

ಕೋಳಿ ಸಾಕುವುದಿಲ್ಲ, ಮಂಚ-ಗಾದಿಗೆ ನಿಷೇಧ; ಮೈಲಾರಿ ಗ್ರಾಮದ ವಿಶಿಷ್ಟ ಆಚರಣೆ - ಯಾದಗಿರಿ ಜಿಲ್ಲೆ

ಗಿರಿನಾಡು ಯಾದಗಿರಿ ಜಿಲ್ಲೆಯಲ್ಲಿನ ಐತಿಹಾಸಿಕ ದೇವಸ್ಥಾನಗಳಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನ ಕೂಡ ಒಂದು. ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಮೈಲಾರ ಮಲ್ಲಯ್ಯ ದೇವಸ್ಥಾನವಿರುವ ಗ್ರಾಮದಲ್ಲಿ ಜನ ಹಿಂದಿನಿಂದಲೂ ಕೆಲ ವಿಚಿತ್ರ ಆಚರಣೆಗಳನ್ನು ಆಚರಿಸುತ್ತಾ ಬಂದಿದ್ದಾರೆ. ಒಂದು ವೇಳೆ ಈ ಆಚರಣೆಗಳನ್ನು ಪಾಲಿಸದಿದ್ದರೆ ಕೇಡು ಕಟ್ಟಿಟ್ಟ ಬುತ್ತಿ ಅನ್ನೋದು ಗ್ರಾಮಸ್ಥರ ನಂಬಿಕೆಯಾಗಿದೆ. ಈ ಊರಲ್ಲಿ ಕೋಳಿ ಸಾಕೋದಿಲ್ಲ, ಮದುವೆಯಾದ್ರೆ ಉಡುಗೊರೆಯಾಗಿ ಮಂಚ, ಗಾದಿ ನೀಡೋದಿಲ್ವಂತೆ.

mailari-villege-people-following-diffrent-cultures-in-yadagiri-district
ಕೋಳಿ ಸಾಕುವುದಿಲ್ಲ, ಮಂಚ-ಗಾದಿಗೆ ನಿಷೇಧ; ಮೈಲಾರಿ ಗ್ರಾಮದಲ್ಲಿವೆ ವಿಶಿಷ್ಠ ಆಚರಣೆಗಳು

By

Published : Jun 20, 2020, 10:43 PM IST

ಯಾದಗಿರಿ: ತಾಲೂಕಿನ ಮೈಲಾರ ಗ್ರಾಮದಲ್ಲಿನ ಐತಿಹಾಸಿಕ ಮೈಲಾರಲಿಂಗೇಶ್ವರ ದೈವ ಸನ್ನಿಧಿಯಲ್ಲಿ ಕೋಳಿ ಹೆಸರು ಕೇಳಿದ್ರೆ ಜನ ಒಂದು ಕ್ಷಣ ಬೆಚ್ಚಿ ಬೀಳ್ತಾರೆ. ನೂರಾರು ವರ್ಷಗಳಿಂದ ಈ ಗ್ರಾಮದಲ್ಲಿನ ಜನ ಕೋಳಿ ಸಾಕಾಣಿಕೆ ಮಾಡುವುದಿಲ್ಲ. ಒಂದು ವೇಳೆ ಕೋಳಿ ಸಾಕಿದ್ರೆ ಕೆಡಕಾಗುತ್ತೆ ಅನ್ನೋದು ಗ್ರಾಮಸ್ಥರ ನಂಬಿಕೆಯಾಗಿದೆ.

ಕೋಳಿ ಸಾಕುವುದಿಲ್ಲ, ಮಂಚ-ಗಾದಿಗೆ ನಿಷೇಧ; ಮೈಲಾರಿ ಗ್ರಾಮದಲ್ಲಿವೆ ವಿಶಿಷ್ಟ ಆಚರಣೆಗಳು

ಈ ಹಿಂದೆ ಜನ ಕೋಳಿ ಸಾಕಾಣಿಕೆ ಮಾಡಿ ಪಡಬಾರದ ಸಂಕಷ್ಟಗಳು ಅನುಭವಿಸಿದ್ದಾರಂತೆ. ಹೀಗಾಗಿ ಗ್ರಾಮದಲ್ಲಿನ ಜನ ಯಾವುದೇ ಕಾರಣಕ್ಕೂ ಕೋಳಿ ಸಾಕಾಣಿಕೆ ಮಾಡುವುದೇ ಇಲ್ಲ. ಕೋಳಿ ಒಂದೇ ಅಲ್ಲ, 1500 ಜನಸಂಖ್ಯೆ ಉಳ್ಳ ಮೈಲಾರ ಗ್ರಾಮದಲ್ಲಿ ಕ್ಷೌರಿಕರಿಲ್ಲ. ಕಟಿಂಗ್ ಶಾಪ್‌ಗಳು ಇಲ್ಲವೇ ಇಲ್ಲ. ಗ್ರಾಮಸ್ಥರು ಕಟಿಂಗ್ ಮಾಡಿಸಿಕೊಳ್ಳಬೇಕಾದರೆ ಪಕ್ಕದ ಗ್ರಾಮಗಳಿಗೆ ಹೋಗಬೇಕು. ಇಲ್ಲವೇ ಬೇರೆ ಗ್ರಾಮದಿಂದ ಕ್ಷೌರಿಕರು ಬಂದು ಕಟಿಂಗ್ ಮಾಡಿ ಹೋಗುತ್ತಾರಂತೆ.

ಗ್ರಾಮದಲ್ಲಿ ಮಂಚ, ಗಾದಿಗೆ ನಿಷೇಧ

ಮತ್ತೊಂದು ವಿಶೇಷತೆ ಅಂದ್ರೆ ಮದುವೆ ಸಂದರ್ಭಗಳಲ್ಲಿ ಮಂಚ ಮತ್ತು ಗಾದಿ ಉಡುಗೊರೆಯಾಗಿ ಕೊಡುವುದಿಲ್ಲ, ತೆಗೆದುಕೊಳ್ಳುವುದಿಲ್ಲ. ಗ್ರಾಮಸ್ಥರೆಲ್ಲ ನೆಲದ ಮೇಲೆ ಚಾಪೆ ಮತ್ತು ಹಾಸಿಗೆ ಮೇಲೆ ಮಲಗುತ್ತಾರೆ. ಸಾವಿರಾರು ವರ್ಷಗಳ ಹಿಂದೆ ಮಲ್ಲಯ್ಯ ದೇವರು ಹಾಗೂ ಅವರ ಇಬ್ಬರು ಪತ್ನಿಯರ ಮೂರ್ತಿಗಳನ್ನು ಮಂಚದ ಮೇಲಿಟ್ಟು, ಜೊತೆಗೆ ಒಂದು ಬುಟ್ಟಿಯಲ್ಲಿ ಮಲ್ಲಿಗೆ ಹೂವು ಇಟ್ಟಿದ್ದರಂತೆ. ಬೆಳಗಾಗುವಷ್ಟರಲ್ಲಿ ಮಂಚದ ತುಂಬೆಲ್ಲ ಮಲ್ಲಿಗೆ ಹೂವುಗಳು ಹರಡಿಕೊಂಡಿದ್ದವಂತೆ‌. ಅಲ್ಲದೆ ಮಲ್ಲಯ್ಯ ಮತ್ತು ಆತನ ಪತ್ನಿಯರಿಬ್ಬರ ಮೂರ್ತಿಗಳು ಒಂದೊಂದು ದಿಕ್ಕಿನಲ್ಲಿ ಬಿದ್ದಿದ್ದವಂತೆ. ಹೀಗಾಗಿ ಈ ಊರಲ್ಲಿ ಮಲ್ಲಯ್ಯ ದೇವರಿಗಷ್ಟೆ ಮಂಚ ಅಂತಾರೆ ದೇವಸ್ಥಾನದ ಅರ್ಚಕರಾದ ಈಶ್ವರ ಪೂಜಾರಿ.

ಮಲ್ಲಯ್ಯ ದೇವರು ಧ್ಯಾನದಲ್ಲಿ ಕುಳಿತಾಗ ಕೋಳಿ ಕೂಗಿ ತಪಸ್ಸು ಭಂಗವಾಗಿತ್ತಂತೆ. ಅಂದಿನಿಂದ ಈ ಗ್ರಾಮದಲ್ಲಿ ಯಾರೂ ಕೋಳಿ ಸಾಕುವುದಿಲ್ಲ. ಪ್ರತಿವರ್ಷ ಜನವರಿ 14 ರಂದು ಜರುಗುವ ಮಲ್ಲಯ್ಯನ ಜಾತ್ರೆಗೆ ಲಕ್ಷಾಂತರ ಸಂಖ್ಯೆಯ ಜನ್ರು ಸಾಕ್ಷಿಯಾಗುತ್ತಾರೆ. ಆದ್ರೆ ಗ್ರಾಮಸ್ಥರ ಆಚರಣೆಗಳು ಮಾತ್ರ ವಿಶಿಷ್ಟವಾಗಿವೆ...

ABOUT THE AUTHOR

...view details