ಯಾದಗಿರಿ: ಶಿರಾ ಮತ್ತು ಆರ್.ಆರ್ ನಗರ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಹಾಗೂ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಲಾಗಿದೆ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಯಾದಗಿರಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ನಡೆದ ಈಶಾನ್ಯ ವಲಯ ಶಿಕ್ಷಕರ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿ ನಾಯಕರನ್ನು ಹೊರತುಪಡಿಸಿ ಕಾಂಗ್ರೆಸ್ನವರ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಅಂತಾ ಕೈ ನಾಯಕರು ಆರೋಪ ಮಾಡುತ್ತಿದ್ದಾರೆ. ಕೋಟ್ಯಂತರ ಹವಾಲಾ ಹಣ ಡಿಕೆಶಿ ಮನೆಯಲ್ಲಿ ಸಿಗಲಿಲ್ವಾ? ಡಿಕೆಶಿ ಜೈಲಿಗೆ ಹೋಗಿ ಬರಲಿಲ್ವಾ? ಈಗ ತಮ್ಮ ಅಧ್ಯಕ್ಷ ಡಿಕೆಶಿ ಪರ ಕಾಂಗ್ರೆಸ್ನವರು ಮಾತನಾಡುತ್ತಿದ್ದಾರೆ. ಮುಂಬರುವ ವಿಧಾನಸಭಾ ಉಪ ಚುನಾವಣೆ ಗೆಲ್ಲುವ ಉದ್ದೇಶದಿಂದ ದಾಳಿ ನಡೆಸಲಾಗಿದೆ ಅಂತಾ ಅಪಪ್ರಚಾರ ಮಾಡುತ್ತಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಷ್ಟು ಜನ ಕಾಂಗ್ರೆಸ್ ನಾಯಕರ ಮನೆ ಮೇಲೆ ತನಿಖಾ ತಂಡದ ಅಧಿಕಾರಿಗಳಿಂದ ದಾಳಿ ನಡೆದಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.