ಸುರಪುರ:ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಯಿಂದ ತಾಲೂಕಿನಲ್ಲಿ ಸಾವಿರಾರು ಎಕರೆ ಬೆಳೆ ನಷ್ಟ ಸಂಭವಿಸಿದ್ದು, ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.
ಮಹಾಮಳೆಗೆ ಸುರಪುರ ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟ: ಪರಿಹಾರಕ್ಕಾಗಿ ರೈತರ ಆಗ್ರಹ
ಭಾರೀ ಮಳೆಯಿಂದ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಷ್ಟ ಸಂಭವಿಸಿದೆ.
ತಾಲೂಕಿನ ಬೈರಿಮರಡಿ, ಬಾದ್ಯಾಪುರ, ಲಕ್ಷ್ಮೀಪುರ, ರತ್ತಾಳ, ಸಿದ್ದಾಪುರ, ಸತ್ಯಂಪೇಟೆ, ಮಾವಿನಮಟ್ಟಿ ಸೇರಿದಂತೆ ಅನೇಕ ಗ್ರಾಮಗಳ ರೈತರ ಜಮೀನುಗಳು ಮಳೆ ನೀರಿನಿಂದ ಮುಳುಗಡೆಯಾಗಿವೆ. ಬೈರಿಮರಡಿ ಗ್ರಾಮದ ರೈತರ ಜಮೀನಿಗೆ ಹಳ್ಳದ ನೀರು ನುಗ್ಗಿ ಹತ್ತಿ ಬೆಳೆ ಸಂಪೂರ್ಣ ಮುಳುಗಿ ಬೆಳೆ ಕೊಳೆಯುವ ಭೀತಿ ಎದುರಾಗಿದೆ. ರೈತರು ತಮ್ಮ ಜಮೀನಿನಲ್ಲಿ ನಿಂತ ನೀರಿನಲ್ಲಿ ಈಜಿ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ.
ಸತ್ಯಂಪೇಟೆ ಲಕ್ಷ್ಮೀಪುರ ಗ್ರಾಮದ ಹಳ್ಳದ ದಂಡೆಯ ಶಿವರುದ್ರ ಉಳ್ಳಿ ಎಂಬುವರ ನೂರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಭತ್ತದ ಬೆಳೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಇಷ್ಟೆಲ್ಲಾ ಅವಾಂತರ ಆದರೂ ಯಾವುದೇ ಅಧಿಕಾರಿಗಳು ಕೂಡ ಗ್ರಾಮಗಳಿಗೆ ಭೇಟಿ ಕೊಟ್ಟಿಲ್ಲ ಎಂದು ರೈತರು ಆಳಲು ತೋಡಿಕೊಂಡಿದ್ದಾರೆ. ಸೂಕ್ತ ಪರಿಹಾರಕ್ಕಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ.