ಯಾದಗಿರಿ:ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಬಳಿ ಪ್ರಕೃತಿ ಮಾತೆಯ ಮಡಿಲಲ್ಲಿರುವ ಗವಿ ಸಿದ್ಧಲಿಂಗೇಶ್ವರ ಜಲಪಾತ ಪ್ರಕೃತಿ ಪ್ರೇಮಿಗಳನ್ನು ಹಾಗೂ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.
ಜಿಲ್ಲಾ ಕೇಂದ್ರದಿಂದ ಕೇವಲ 35 ಕಿಲೋ ಮೀಟರ್ ಕ್ರಮಿಸಿದರೆ ಬೆಟ್ಟ - ಗುಡ್ಡಗಳ ನಡುವೆ ತನ್ನದೇ ಐಸಿರಿ ಹೊತ್ತ ಈ ವಿಶೇಷ ಜಲಪಾತ ಸಿಗುತ್ತದೆ. ಎಲ್ಲ ಋತುವಿನಲ್ಲೂ ಧುಮ್ಮಿಕ್ಕಿ ಹರಿಯುವ ಜಲಪಾತಕ್ಕೆ ಇಲ್ಲಿಯವರೆಗೂ ಬರದ ಛಾಯೆ ಆವರಿಸಿಲ್ಲ. ಇದು ಈ ಜಲಪಾತದ ಮತ್ತೊಂದು ವಿಶೇಷ. ಇಲ್ಲಿನ ಪ್ರಕೃತಿ ಸೌಂದರ್ಯ ಅನುಭವಿಸಲೆಂದೇ ಕಲಬುರಗಿ, ರಾಯಚೂರು ಮತ್ತು ಜಿಲ್ಲೆಯ ಗಡಿಭಾಗದಲ್ಲಿರುವ ಆಂಧ್ರದಿಂದ ನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ. ಹಚ್ಚ ಹಸಿರಿನ ಸೊಬಗಿನ ಮಧ್ಯೆ ವಯ್ಯಾರದಿಂದ ಹರಿಯುತ್ತಿರುವ ಜಲಧಾರೆ ನಡುವೆ ನೆನೆದು ಪ್ರವಾಸಿಗರು ಮತ್ತು ಪುಟಾಣಿಗಳು ಗವಿಯೊಳಗೆ ಹೋಗುತ್ತಾರೆ.