ಯಾದಗಿರಿ:ರೈತರು ರಸ್ತೆ ಬದಿಯಲ್ಲಿ ರಾಶಿ ಮಾಡುವುದನ್ನು ತಪ್ಪಿಸಿ, ವೈಜ್ಞಾನಿಕ ಕೃಷಿ ಯಂತ್ರಧಾರೆಯ ಉಪಕರಣಗಳನ್ನು ಬಳಸುವ ಮೂಲಕ ಕೃಷಿ ಉತ್ಪನ್ನಗಳ ರಾಶಿ ಮಾಡುವಂತೆ ರೈತರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2020 - 21 ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ, ಕೃಷಿ ಯಂತ್ರದಾರೆ ಹಾಗೂ ತಂತ್ರಜ್ಞಾನ ರಾಷ್ಟ್ರೀಯ ಮಿಷನ್ ಆತ್ಮ ಯೋಜನೆಯ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಯಂತ್ರಧಾರೆ ಮೂಲಕ ಹೋಬಳಿ ಮಟ್ಟದಲ್ಲಿ ಚಾರಿಟಬಲ್ ಟ್ರಸ್ಟ್, ಸರ್ಕಾರೇತರ ಸಂಸ್ಥೆಗಳು, ಯಂತ್ರೋಪಕರಣಗಳ ಉತ್ಪಾದಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ಥಾಪನೆ ಮಾಡಿ ಸ್ಥಳೀಯ ಬೆಳೆಗಳಿಗೆ ಅನುಗುಣವಾಗಿ ಹಾಗೂ ರೈತರಿಂದ ಬೇಡಿಕೆ ಇರುವ ಯಂತ್ರೋಪಕರಣಗಳಿಗೆ ಜಿಲ್ಲಾ ಮಟ್ಟದ ಸಮಿತಿಯಿಂದ ಅನಮೋದನೆ ಪಡೆದು ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ದಾಸ್ತಾನು ಮಾಡಬೇಕು. ರೈತರಿಗೆ ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಪೂರಕವಾಗುವಂತೆ ಕಡಿಮೆ ಬಾಡಿಗೆ ದರದಲ್ಲಿ ಭೂಮಿ ಸಿದ್ಧತೆಯಿಂದ ಕೊಯ್ಲು ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಉಪಯುಕ್ತವಾಗುವ ವಿವಿಧ ರೀತಿಯ ಕೃಷಿ ಯಂತ್ರೋಪಕರಣಗಳನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.