ಯಾದಗಿರಿ: ರೈತರು ಬೆಳೆ ವಿಮೆ ಮಾಡಿಸೋದು ಕಷ್ಟಕಾಲದಲ್ಲಿ ಅವರ ಕೈ ಹಿಡಿಯಲಿ ಅಂತಾ. ಆದ್ರೆ, ಜಿಲ್ಲೆಯ ರೈತರಿಗೆ ಮಾತ್ರ ಅದೇನೆ ಸಂಕಷ್ಟ ಎದುರಾದರು ಬೆಳೆ ವಿಮೆ ಮಾತ್ರ ಕೈ ಸೇರುತ್ತಿಲ್ಲ.
ಹಲವು ವರ್ಷಗಳಿಂದ ಮಳೆಯಿಲ್ಲದೆ ಬರಗಾಲ ಅನುಭವಿಸಿದ್ದ ಯಾದಗಿರಿ ಜಿಲ್ಲೆಯ ರೈತರಿಗೆ ಈ ಬಾರಿ ಅಗತ್ಯಕ್ಕಿಂತ ಹೆಚ್ಚು ಮಳೆ ಸುರಿದು ಬೆಳೆ ನಾಶವಾಗಿವೆ. ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆದಿದ್ದ ಬೆಳೆಗಳು ನೆಲಕಚ್ಚಿವೆ. ಇಂತಹ ಸಂದರ್ಭದಲ್ಲಿ ಇವರ ಕೈಹಿಡಿಯಬೇಕಾದ ಬೆಳೆ ವಿಮೆ ಮಾತ್ರ ಮರೀಚಿಕೆಯಾಗಿದೆ. ಪರಿಣಾಮ ಜಿಲ್ಲೆಯ ವಡಗೇರಾ ತಾಲೂಕಿನ ಅನೇಕ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿ ಬಾರಿ ವಿಮಾ ಕಂಪನಿಗಳಿಗೆ ಪ್ರೀಮಿಯಂ ಕಟ್ಟಿದ ರೈತರ ಹಣ ದೇವರ ಹುಂಡಿಗೆ ಹಾಕಿದಂತಾಗಿದೆ. ಬರಗಾಲ ಬಂದ ಬಳಿಕ ಧಾರಾಕಾರ ಮಳೆಯಿಂದ ಬೆಳೆ ಹಾನಿಯಾದ್ರೂ ಕಳೆದ ಎರಡು ಮೂರು ವರ್ಷಗಳಿಂದ ಈ ಭಾಗದ ರೈತರಿಗೆ ಬೆಳೆ ವಿಮೆ ತಲುಪುತ್ತಿಲ್ಲ ಎನ್ನುತ್ತಾರೆ ಇಲ್ಲಿನ ರೈತರು.
ಈ ಭಾಗದ ರೈತರು ಬೆಳೆ ಸಾಲ ಪಡೆದು ಕೃಷಿ ಮಾಡುತ್ತಾರೆ. ಬ್ಯಾಂಕ್ಗಳು ಸಾಲ ನೀಡುವಾಗಲೇ ಕಡ್ಡಾಯವಾಗಿ ವಿಮಾ ಮಾಡಿಸಿಕೊಳ್ಳುತ್ತಿದ್ದವು. ಆದ್ರೆ, ಬರಗಾಲ ಬಂದಾಗ, ಮಳೆಯಿಂದ ಬೆಳೆಗಳು ನಾಶವಾದಾಗ, ಈ ರೈತರ ಸಮೀಪ ಯಾರೂ ಸುಳಿಯುವುದಿಲ್ಲ.
ರೈತರಿಗೆ ಇತ್ತ ಬೆಳೆಯೂ ಹೋಯ್ತು, ಅತ್ತ ಕೈಯಲ್ಲಿದ್ದ ಬಿಡಿಗಾಸು ವಿಮಾ ಕಂಪನಿಗಳ ಪಾಲಾಯ್ತು ಎನ್ನುವಂತಾಗಿದೆ. ಈ ವಿಚಾರವನ್ನು ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರ ಗಮನಕ್ಕೆ ತಂದಾಗ, ಸರ್ಕಾರದ ಗಮನಕ್ಕೆ ಈ ವಿಷಯ ತರುತ್ತೇನೆ. ಆ ಭಾಗದ ಜನರಿಗೆ ವಿಮಾ ಮತ್ತು ಬೆಳೆ ಹಾನಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.