ಯಾದಗಿರಿ: ಬುಧವಾರ ನಡೆದ ವಿಧಾನಸಭೆ ಚುನಾವಣೆಯ ನಂತರ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ಬಿಜೆಪಿ ಮತ್ತು ಕಾಂಗ್ರೇಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಗಲಾಟೆ ವೇಳೆ ಜಿಪಂ ಮಾಜಿ ಅದ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಸಿದ್ಧನಗೌಡ ಪೊಲೀಸ್ ಪಾಟೀಲ ಅವರ ಪುತ್ರ ಆದಿತ್ಯ ಪಾಟೀಲ ಹಾಗೂ ಪುರಸಭೆ ಮಾಜಿ ಸದಸ್ಯ ರಾಘವೇಂದ್ರ ದೇಶಪಾಂಡೆ ಮೇಲೆ ಹಲವರು ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಆದಿತ್ಯ ಪಾಟೀಲ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಳಿಕ ಹಲವೆಡೆ ಪ್ರಕ್ಷ್ಯುಬ್ದ ವಾತಾವರಣ ನಿರ್ಮಾಣವಾಗಿದ್ದು, ನಗರದ ಸೂಕ್ಷ್ಮ ಪದೇಶಗಳಲ್ಲಿ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿದೆ. 144 ಸೆಕ್ಷನ್ ಜಾರಿ ಮಾಡಲಾಗಿದೆ. ಬುಧವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ ಸೆಕ್ಷನ್ ಜಾರಿ ಮಾಡಲಾಗಿದೆ.
ಶಾಸಕರ ಭೇಟಿ:ಕಾಂಗ್ರೇಸ್ ಮುಖಂಡರ ಮೇಲೆ ಹಲ್ಲೆ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆದಿತ್ಯ ಪಾಟೀಲ ಹಾಗೂ ರಾಘವೇಂದ್ರ ದೇಶಪಾಂಡೆ ಅವರ ಆರೋಗ್ಯ ವಿಚಾರಿಸಿದರು. ಘಟನೆ ಕುರಿತು ಸಂಪೂರ್ಣ ಮಾಹಿತಿ ಪಡೆದ ಅವರು ಪಟ್ಟಣದಲ್ಲಿ ಇನ್ನಷ್ಟು ಪೊಲೀಸ್ ಪಡೆ ನಿಯೋಜನೆ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚುನಾವಣೋತ್ತರ ನಂತರ ನಡೆದ ಗಲಾಟೆ ಹಿನ್ನೆಲೆ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್‌ಪಿ ಜೆ.ಎಸ್. ನ್ಯಾಮಗೌಡರ್ ನೇತೃತ್ವದಲ್ಲಿ ಸಿಪಿಐ ಚನ್ನಯ್ಯ ಹಿರೇಮಠ, ಎಮ್. ಬಿ. ಚಿಕ್ಕಣ್ಣನವರ ಅರೆ ಸೇನಾಪಡೆಯೊಂದಿಗೆ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ.