ಯಾದಗಿರಿ: ಕಾರ್ ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ನಾರಾಯಣಪುರ ಎಡದಂಡೆ ಕಾಲುವೆಗೆ ಬಿದ್ದ ಪರಿಣಾಮ ಒಂದೆ ಕುಟುಂಬದ ಮೂರು ಜನ ನೀರು ಪಾಲಾದ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಗುಳಬಾಳ ಗ್ರಾಮದ ಬಳಿ ನಡೆದಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬನ್ನಟ್ಟಿ ಗ್ರಾಮದ ಪವನ್ ಬಿರಾದಾರ್ (34) ಮೃತಪಟ್ಟಿದ್ದು, ಪವನ್ ತಂದೆ ಶರಣಗೌಡ ಬಿರಾದಾರ್(61) ತಾಯಿ ಜಾನಕಿ ಬಿರಾದಾರ್(55) ಕಾರಿನೊಂದಿಗೆ ನೀರು ಪಾಲಾಗಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು ಮೂರು ವರ್ಷದ ಮಗು ಸೇರಿ ಒಟ್ಟು ಐದು ಜನ ಕಾರಿನಲ್ಲಿ ತಮ್ಮ ಜಮೀನನ್ನು ನೋಡಲು ಬಂದಿದ್ದರು. ಮರಳಿ ತೆರಳುತ್ತಿದ್ದ ಸಮಯದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಕಾಲುವೆಗೆ ಬಿದ್ದಿತ್ತು. ಈ ಸಮಯದಲ್ಲಿ ಪವನ್ ಪತ್ನಿ ಪ್ರೇಮಾ(28) ತಮ್ಮ ಮೂರು ವರ್ಷದ ಮಗುವಿನೊಂದಿಗೆ ಈಜಿ ದಡ ಸೇರಿದ್ದಾರೆ.
ಆದ್ರೆ ಕಾರಿನಲ್ಲಿದ್ದ ಇನ್ನೂ ಮೂರು ಜನ ನೀರು ಪಾಲಾಗಿದ್ದಾರೆ. ಪವನ್ ಮೃತದೇಹ ಪತ್ತೆಯಾಗಿದ್ದು, ಇತರ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದೆ. ಸ್ಥಳಕ್ಕೆ ಹುಣಸಗಿ ಪೊಲೀಸರು ಭೇಟಿ ನೀಡಿ ಘಟನೆ ಮಾಹಿತಿ ಪಡೆಯುತ್ತಿದ್ದಾರೆ.