ವಿಜಯಪುರ:ಬಟ್ಟೆ ತೊಳೆಯಲು ಕಾಲುವೆಗೆ ಹೋಗಿದ್ದ ಯುವಕನೊಬ್ಬ ಕಾಲು ಜಾರಿ ಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರ ಭಾಗದಲ್ಲಿನ ಕಾಲುವೆಯಲ್ಲಿ ಈ ಘಟನೆ ನಡೆದಿದ್ದು, ದುರ್ಗಪ್ಪ ಗೊಲ್ಲರ (20) ಕಾಲುವೆ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.
ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಯಲ್ಲಿ ಈ ದುರ್ಘಟನೆ ನಡೆದಿದೆ. ಮೂವರು ಯುವಕರು ಬಟ್ಟೆ ತೊಳೆಯಲು ಕಾಲುವೆಯಲ್ಲಿ ಇಳಿದಿದ್ದ ವೇಳೆ ಕಾಲು ಜಾರಿ ಕಾಲುವೆಯಲ್ಲಿ ಬಿದ್ದ ದುರ್ಗಪ್ಪನಿಗೆ ಈಜು ಬಾರದೇ ಸಾವನ್ನಪ್ಪಿದ್ದಾನೆ. ಜೊತೆಗಿದ್ದ ಇಬ್ಬರು ಯುವಕರು ದುರ್ಗಪ್ಪನ ರಕ್ಷಣೆಗೆ ಶ್ರಮಪಟ್ಟರೂ ಸಹ ವಿಫಲರಾಗಿದ್ದಾರೆ.