ವಿಜಯಪುರ:"ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮದೇ ಪಕ್ಷ,ಸಮುದಾಯದವರಾದ ಮುರುಗೇಶ್ ನಿರಾಣಿ ಅವರ ವಿರುದ್ಧ ಮಾತನಾಡಿರುವುದನ್ನು ಸುಸಂಸ್ಕೃತ ಸಮಾಜ ಒಪ್ಪುವಂತದ್ದಲ್ಲ" ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಹಿರಿಯ ನಾಯಕರಾದ ನಿರಾಣಿ ಅವರನ್ನು ಕೇಂದ್ರ ಸಚಿವರಾಗಿದ್ದ ಯತ್ನಾಳ್ ಕತ್ತೆ, ನಾಯಿ ಎಂದು ಕರೆದಿರುವುದು ಇಡೀ ರಾಜಕೀಯಕ್ಕೆ ಅವಮಾನ ಮಾಡಿದಂತಾಗಿದೆ" ಎಂದರು.
"ಯತ್ನಾಳ್ ರಾಜಕಾರಣಕ್ಕೆ ಅಪವಾದ. ತನ್ನದೇ ಜಾತಿ, ತನ್ನದೇ ಪಾರ್ಟಿಯ ಮುಖಂಡರಿಗೆ ಹಂದಿ, ನಾಯಿ ಅನ್ನುತ್ತಾರೆ. ನಾಚಿಕೆ ಆಗಲ್ವಾ, ನೀನೊಬ್ಬ ನಾಯಕನಾ? ಮುಂದಿನ ಯುವ ಪೀಳಿಗೆಗೆ ನೀನು ಕೊಡುವ ಸಂದೇಶವಾದರೂ ಏನು?. ಅಯೋಗ್ಯತನಕ್ಕೆ ಒಂದು ಮಿತಿ ಬೇಕು. ಯತ್ನಾಳ್ ಅವರ ಪದಪ್ರಯೋಗವನ್ನು ನಾನು ಖಂಡಿಸುತ್ತೇನೆ. ಸುಸಂಸ್ಕೃತ ಮತ್ತು ಅನಾಗರಿಕವಾಗಿ ಮಾತನಾಡುವುದನ್ನು ಯತ್ನಾಳ್ ನಿಲ್ಲಿಸಬೇಕು ಎಂದು ನಾಗರಿಕ ಸಮಾಜದ ಪರವಾಗಿ ವಿನಂತಿ ಮಾಡುತ್ತೇನೆ" ಎಂದು ಹೇಳಿದರು.
"ಬಿ.ಎಸ್.ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿದ್ದು ಯಾರು?. ವಿಜಯೇಂದ್ರ ಅಲ್ಲವೇ ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗಲೇ ಜೈಲಿಗೆ ಹೋಗಲು ಕಾರಣ. 20 ಕೋಟಿ ಲಂಚವನ್ನು ಆರ್ಟಿಜಿಎಸ್ ಮೂಲಕ ತೆಗೆದುಕೊಳ್ಳಲಿಲ್ಲವೇ?. ಒಬ್ಬ ಪೆದ್ದ, ಲಂಚಕೋರ ರಾಜ್ಯದ ಬಿಜೆಪಿ ಅಧ್ಯಕ್ಷನಾ ಅವನು?" ಎಂದು ವಾಗ್ದಾಳಿ ನಡೆಸಿದರು.