ವಿಜಯಪುರ :ಗೋರಿಯಲ್ಲಿ ಈಗಾಗಲೇ ಕಾಲು ಇಟ್ಟಿದ್ದೇನೆ, ಮತ್ತೇಕೆ ಕಾಂಗ್ರೆಸ್ಗೆ ಹೋಗಲಿ, ನಾನು ಜೀವನ ಪರ್ಯಂತ ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿದ್ದೇನೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಹೇಳಿದರು. ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಮನಬಿಚ್ಚಿ ವಿಜಯಪುರದಲ್ಲಿ ಮಾತನಾಡಿದ ರಮೇಶ್ ಜಿಗಜಿಣಗಿ ನಾನು ಕಾಲೇಜು ದಿನಗಳಿಂದಲೇ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಾ ಬಂದಿದ್ದೇನೆ.
ಕಾರಣ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿ ಕಾಂಗ್ರೆಸ್ ವಿರುದ್ದ ಸಿಡಿದೇಳುವಂತೆ ಮಾಡಿತು ಎಂದು ಕಿಡಿಕಾರಿದರು. ನಾನು ವಿದ್ಯಾವಂತನಾಗಿದ್ದ ಕಾರಣದಿಂದ ಕಾಂಗ್ರೆಸ್ ಪಕ್ಷದ ನಡೆಯ ಬಗ್ಗೆ ಪರಿಜ್ಞಾನವಿತ್ತು. ಆ ಭಾವನೆ ಯಾರು ಹೋಗಲಾಡಿಸಲು ಸಾಧ್ಯವಿಲ್ಲ ಎಂದರು. ಕಾಂಗ್ರೆಸ್ ಮತ ಬ್ಯಾಂಕ್ ದಲಿತರು, ಹಿಂದುಳಿದವರೇ ಆಗಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಈ ಹಿಂದೆ ಈ ರೀತಿ ಮತ ಹಾಕುವುದು ಇತ್ತು. ಆವಾಗ ದಲಿತರು ಅವಿದ್ಯಾವಂತರಾಗಿದ್ದು, ಹೆಬ್ಬೆಟ್ಟು ಒತ್ತುವ ಕಾಲವಿತ್ತು. ಈಗ ಅವರು ವಿದ್ಯಾವಂತರಾಗಿದ್ದಾರೆ. ಯಾವ ಪಕ್ಷ ಅಭಿವೃದ್ಧಿ ಪರವಿದೆ ಎಂಬ ಅರಿವು ಇದೆ ಎಂದು ಹೇಳಿದರು.
ಕಾಂಗ್ರೆಸ್ ನಮ್ಮನ್ನು ಮತ ಬ್ಯಾಂಕ್ ಮಾಡಿಕೊಂಡಿತ್ತು. ಹೊರತು ಯಾವ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ಅವರೇ ಹೇಳುತ್ತಿದ್ದಾರೆ ಎಂದರು. ಈ ಹಿಂದೆ ಕಾಂಗ್ರೆಸ್ ಪರ ಯಾವ ವಾತಾವರಣ ಇತ್ತು ಎಂದರೆ ಸ್ವತ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನನ್ನ ಅಜ್ಜಿ ಕಾಂಗ್ರೆಸ್ ಗೆ ಮತ ಹಾಕಿದ್ದಳು ಎಂದು ಅಂದಿನ ಕಾಲದ ಪರಿಸ್ಥಿತಿಯನ್ನು ಮೆಲುಕು ಹಾಕಿದರು.