ಕರ್ನಾಟಕ

karnataka

ETV Bharat / state

ವಿಜಯಪುರ: ಸೈಡ್​ಗೆ ಹೋಗೆಂದು ಬುದ್ಧಿವಾದ ಹೇಳಿದ್ದಕ್ಕೆ ವೃದ್ಧನಿಗೆ ಚಾಕು ಇರಿದು ಕೊಲೆ; ಆರೋಪಿ ಪರಾರಿ - ವೃದ್ಧನ ಹತ್ಯೆ

ದ್ವಿಚಕ್ರ ವಾಹನದಲ್ಲಿ ಹೋಗುವಾಗ ಎದುರಿಗೆ ಬಂದ ಆರೋಪಿಗೆ ಸೈಡ್ ಹೋಗುವಂತೆ ಬುದ್ಧಿವಾದ ಹೇಳಿದ್ದಕ್ಕೆ ವೃದ್ಧನನ್ನು ಕೊಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

Alamela Police Station
ಆಲಮೇಲ ಪೊಲೀಸ್ ಠಾಣೆ

By ETV Bharat Karnataka Team

Published : Jan 6, 2024, 9:55 PM IST

ವಿಜಯಪುರ:ದ್ವಿಚಕ್ರ ವಾಹನದಲ್ಲಿ ಹೋಗುವಾಗ ಸೈಡ್ ಹೋಗುವಂತೆ ಬುದ್ಧಿವಾದ ಹೇಳಿದ ಮಾತ್ರಕ್ಕೆ ವೃದ್ಧನ ಹತ್ಯೆ ಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಇಂಡಿ ರಸ್ತೆಯಲ್ಲಿ ನಡೆದಿದೆ. ಅಲಮೇಲ ನಿವಾಸಿ ಕಾಂತಪ್ಪ ವಿಭೂತಿಹಳ್ಳಿ ಎಂಬ ವೃದ್ಧ ಕೊಲೆಗೀಡಾದವರು. ಈ ಪ್ರಕರಣದ ಕುರಿತು ಸ್ಥಳೀಯ ಅಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಮನಹಳ್ಳಿಯ ಹಣ್ಣಿನ ವ್ಯಾಪಾರಿ ಅಜೀತ್​ ಆನಂದ ನಂದರಗಿ ಎಂಬಾತ ವೃದ್ಧನನ್ನು ಹತ್ಯೆಗೈದಿರುವ ಆರೋಪಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಬುದ್ಧಿವಾದ ಹೇಳಿದ್ದಕ್ಕೆ ವೃದ್ಧನಿಗೆ ಚಾಕು ಇರಿದು ಪರಾರಿ:ವೃದ್ಧ ಕಾಂತಪ್ಪ ವಿಭೂತಿಹಳ್ಳಿ ತನ್ನ ಮಗನೊಂದಿಗೆ ಬೈಕ್‌ನಲ್ಲಿ ಅಲಮೇಲಗೆ ಪಟ್ಟಣಕ್ಕೆ ಬರುತ್ತಿದ್ದ ವೇಳೆ ಎದುರಿಗೆ ಬೈಕ್ ಮೇಲೆ ಬಂದ ಆರೋಪಿ ಅಜೀತ್​ ನಂದರಗಿಗೆ ಸೈಡ್​ಗೆ ಹೋಗುವಂತೆ ವೃದ್ಧ ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಆರೋಪಿ ಅಜೀತ್​, ಸೈಡ್ ಟ್ರ್ಯಾಕ್ಟರ್ ಇದೆಯೋ ಎಂದು ವೃದ್ಧನನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಯಾಕೆ ಬೈತಿಯಾ ಅಂಥ ವೃದ್ಧ ಕಾಂತಪ್ಪ ಆರೋಪಿಗೆ ಪ್ರಶ್ನಿಸಿದ್ದಾರೆ. ಈ ಕ್ಷುಲ್ಲಕ ಜಗಳದಲ್ಲಿ ಮಾತಿಗೆ ಮಾತಿಗೆ ಬೆಳೆದು ವಿಕೋಪಕ್ಕೆ ತಿರುಗಿದೆ.

ಆರೋಪಿ ಅಜೀತ್​ ಈ ವೇಳೆ ಕಾಂತಪ್ಪನ ಬೈಕ್ ಮೇಲಿದ್ದ ಮಗನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಬುದ್ಧಿವಾದ ಹೇಳಿದ್ದಕ್ಕೆ ನಮಗೆ ಹೊಡೆತೀಯಾ ಎಂದು ಆರೋಪಿಗೆ ವೃದ್ಧ ಕಾಂತಪ್ಪ ಗದರಿಸಿದ್ದಾನೆ. ಈ ಸಂದರ್ಭದಲ್ಲಿ ಆರೋಪಿ ಅಜೀತ್​ ತನ್ನ ಬೈಕ್ ಬ್ಯಾಗದಲ್ಲಿದ್ದ ಚಾಕು ತಂದು ಕಾಂತಪ್ಪನಿಗೆ ಇರಿದು ಪರಾರಿಯಾಗಿದ್ದಾನೆ.

ಆಸ್ಪತ್ರೆಯಲ್ಲಿ ವೃದ್ಧ ಸಾವು:ಈ ಘಟನೆ ಕುರಿತು ವೃದ್ಧನ ಜತೆಗೆ ಇದ್ದ ಮಗನು ತಮ್ಮ ಸಂಬಂಧಿಕರಿಗೆ ತಕ್ಷಣ ಮಾಹಿತಿ ನೀಡಿದ್ದಾನೆ. ಕೂಡಲೇ ಸಂಬಂಧಿಕರೆಲ್ಲ ಸೇರಿ ತೀವ್ರ ಗಾಯಗೊಂಡಿದ್ದ ವೃದ್ಧ ಕಾಂತಪ್ಪ ಅವರನ್ನು ವಿಜಯಪುರದ ಬಿಎಲ್​ಡಿಇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವೃದ್ಧ ಕಾಂತಪ್ಪ ಮೃತಪಟ್ಟಿದ್ದಾರೆ ಎಂದು ಅಲಮೇಲ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ತಕ್ಷಣ ಎಸ್ಪಿ ಋಷಿಕೇಶ್‌ ಸೋನಾವಣೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ :ಮೈಸೂರು ವೈದ್ಯನ ಅಪಹರಣ ಪ್ರಕರಣ: 10 ವರ್ಷಗಳ ಬಳಿಕ ಆರೋಪಿ ಸೆರೆ

ABOUT THE AUTHOR

...view details