ವಿಜಯಪುರ:ಟಿಪ್ಪುಸುಲ್ತಾನ್ ಹತ್ಯೆ ಮಾಡಿದ ಉರಿಗೌಡ ಹಾಗೂ ನಂಜೇಗೌಡ ವಿಚಾರ ಕುರಿತಾಗಿ ನಿರ್ಮಲಾನಂದ ಶ್ರೀ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಚರ್ಚೆ ಮಾಡಿರೋ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಈ ಕುರಿತು ಈಗಾಗಲೇ ಸ್ವಾಮೀಜಿಗಳು ಮುನಿರತ್ನ ಜತೆಗೆ ಚರ್ಚಿಸಿದ್ದಾರೆ. ನಿರ್ಮಲಾನಂದ ಸ್ವಾಮೀಜಿಗಳು ಮುನಿರತ್ನ ಅವರಿಗೆ ಸೂಕ್ಷ್ಯವಾಗಿ ಏನು ಹೇಳಬೇಕು ಅದನ್ನ ಹೇಳಿದ್ದಾರೆ. ಅದಕ್ಕೆ ಮುನಿರತ್ನ ಕೂಡ ಒಪ್ಪಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಮುದ್ದೇಬಿಹಾಳ ತಾಲೂಕು ನಾಲತವಾಡದಲ್ಲಿ ವಿವಿಧ ಯೋಜನೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಆಗಮಿಸಿದ್ದ ಅವರು ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಆ ವಿಚಾರದಲ್ಲಿ ನಿರ್ಮಲಾನಂದ ಶ್ರೀಗಳು ಹೇಳಿದಂತೆ ನಾವೆಲ್ಲ ಒಪ್ಪಿಕೊಂಡಿದ್ದೇವೆ.
ಉರಿಗೌಡ ನಂಜೇಗೌಡ ವಿಚಾರದಲ್ಲಿ ರಾಜಕಾರಣ ಬೇಡ: ಈ ವಿಚಾರದಲ್ಲಿ ಹೆಚ್ಚಿನ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದು ಡಿ ಕೆ ಶಿವಕುಮಾರ್ಗೆ ಹೇಳಲು ಇಚ್ಛೆ ಪಡುತ್ತೇನೆ. ಉರಿಗೌಡ ಹಾಗೂ ನಂಜೇಗೌಡ ವಿಚಾರವನ್ನು ಪಠ್ಯದಲ್ಲಿ ಸೇರಿಸುವ ಕುರಿತು ಮಾತನಾಡಿದ ಸಿಎಂ, ಪಠ್ಯದಲ್ಲಿ ಸೇರಿಸಲು ಅದಕ್ಕೆ ಕೆಲ ಕ್ರಮಗಳಿವೆ. ಅದಕ್ಕಾದ ಕಮಿಟಿ ಇದೆ ಎಂದು ಹೇಳಿದರು.
ಅಥಣಿ ಕ್ಷೇತ್ರದ ಸಮಸ್ಯೆ ಆಗಲ್ಲ: ಬೆಳಗಾವಿ ಅಥಣಿ ಕ್ಷೇತ್ರಕ್ಕೆ ಹಾಲಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ಸಿಗದಿದ್ದರೆ ನಾನು ಗೋಕಾಕದಿಂದ ಸ್ಪರ್ಧೆ ಮಾಡಲ್ಲ ಎಂಬ ರಮೇಶ ಜಾರಕಿಹೊಳಿ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ, ಅದೆಲ್ಲ ಏನಿಲ್ಲವೆಂದು ಸಮಜಾಯಿಷಿ ನೀಡಿದರು. ನಮ್ಮ ಪಕ್ಷದಲ್ಲಿ ಕುಳಿತುಕೊಂಡು ಅದೆಲ್ಲ ಸರಿ ಮಾಡುತ್ತೇವೆ. ಅದೇನು ದೊಡ್ಡ ವಿಚಾರವಲ್ಲ. ರಮೇಶ ಜಾರಕಿಹೊಳಿ ಮಹೇಶ ಕುಮಟಳ್ಳಿ ಹಾಗೂ ಲಕ್ಷ್ಮಣ ಸವದಿಯವರೊಂದಿಗೆ ಮಾತನಾಡಿದ್ದೇನೆ, ಯಾವುದೇ ಸಮಸ್ಯೆ ಆಗಲ್ಲ ಎಂದು ಸ್ಪಷನೆ ನೀಡಿದರು.
ಸಚಿವ ವಿ ಸೋಮಣ್ಣ ಪಕ್ಷ ಬಿಡಲ್ಲ: ಸಚಿವ ವಿ ಸೋಮಣ್ಣ ಪಕ್ಷ ಬಿಡೋ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ ಪಕ್ಷ ಬಿಡಲ್ಲ ಎಂದು ಈಗಾಗಲೇ ಸಚಿವ ಸೋಮಣ್ಣ ಹೇಳಿದ್ದಾರೆಂದು, ಚುನಾವಣೆಗೂ ಮುನ್ನ ಪಕ್ಷಾಂತರ ಪ್ರಕ್ರಿಯೆ ಆರಂಭ ಸಹಜವಾಗಿದೆ. ಬಿಜೆಪಿಯ ಮುಖಂಡ ಬಾಬುರಾವ್ ಚಿಂಚಸೂರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಚುನಾವಣೆಯ ಸಂದರ್ಭದಲ್ಲಿ ಇವೆಲ್ಲಾ ಸಾಮಾನ್ಯ. ಅವರವರ ಕ್ಷೇತ್ರ ಅವರವರ ವಿಚಾರದಲ್ಲಿ ಈ ಕಡೆಯಿಂದ ಆ ಕಡೆಗೆ ಆ ಕಡೆ ಇರ್ತದೆ. ಇವತ್ತು ಜನರು ಬಹಳ ಬುದ್ಧಿವಂತರಿದ್ದಾರೆ. ಎಲ್ಲಿಯವರೆಗೆ ಜನ ಚಿಂತನೆಯನ್ನು ಮಾಡುವದಿಲ್ಲವೋ, ಯಾವುದೇ ರೀತಿಯ ಪಕ್ಷಾಂತರ ಯಾವುದೇ ರೀತಿಯ ಪರಿಣಾಮ ಬೀರಲ್ಲ ಜನರು ಸ್ಥಿರವಾಗಿದ್ದರೆ ಸಾಕು ಎಂದರು.