ವಿಜಯಪುರ:ಭೀಮಾನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿರುವ ಹಿನ್ನೆಲೆ ಕರ್ನಾಟಕದ ಉಮರಾಣಿ ಹಾಗೂ ಮಹಾರಾಷ್ಟ್ರದ ಸೈದಾಪುರದ ನಡುವಿನ ಉಮರಾಣಿ ಬಾಂದಾರ್ ಮೇಲಿನ ನೀರು ಕಡಿಮೆಯಾಗಿದ್ದು, ಎಂದಿನಂತೆ ಮತ್ತೆ ವಾಹನ ಸಂಚಾರ ಆರಂಭವಾಗಿದೆ.
ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದ ಉಜನಿ ಹಾಗೂ ವೀರಾ ಜಲಾಶಯಗಳಿಂದ ಕಳೆದ 15 ದಿನಗಳಿಂದ ಭೀಮಾ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ಉಮರಾಣಿ ಬಾಂದಾರ (ಸೇತುವೆ) ಸಂಪೂರ್ಣ ಮುಳುಗಡೆಯಾಗಿತ್ತು. ಇದರಿಂದ ಎರಡು ರಾಜ್ಯಗಳ ನಡುವಿನ ಸಂಚಾರ ಕಡಿತವಾಗಿತ್ತು. ಇದರಿಂದ ವ್ಯಾಪಾರ ವಹಿವಾಟು ಕೂಡಾ ನಿಂತು ಹೋಗಿತ್ತು.
ಕಳೆದ ನಾಲ್ಕು ದಿನಗಳಿಂದ ಮಹಾರಾಷ್ಟ್ರದ ಜಲಾಶಯಗಳಿಂದ ಬಿಡುತ್ತಿದ್ದ ಹೆಚ್ಚುವರಿ ನೀರು ಸ್ಥಗಿತ ಮಾಡಲಾಗಿತ್ತು. ಹೀಗಾಗಿ ಭೀಮಾ ನದಿ ಇಳಿಮುಖವಾಗಿದೆ. ಇದರ ಪರಿಣಾಮ ಉಮರಾಣಿ ಬಾಂದಾರ ಮೇಲೆ ಹರಿಯುತ್ತಿದ್ದ ನೀರು ತಗ್ಗಿದೆ. ಉಮರಾಣಿ ಸೇತುವೆ ಮೇಲೆ ಮತ್ತೆ ವಾಹನ ಸಂಚಾರ ಯಥಾಸ್ಥಿತಿ ಆರಂಭಗೊಂಡಿದೆ. ಆದರೆ, ಬಾಂದಾರ್ ಮೇಲಿನ ನೀರಿನ ಹರಿವು ಇನ್ನೂ ಪೂರ್ಣ ವಾಗಿ ತಗ್ಗದಿರುವ ಕಾರಣ ವಾಹನ ಸವಾರರು ಎಚ್ಚರಿಕೆ ಸಂಚಾರ ಮಾಡಬೇಕಾಗಿದೆ.