ಮುದ್ದೇಬಿಹಾಳ: ಡಿ.15 ರಂದು ಮುದ್ದೇಬಿಹಾಳದ ಅಂಜುಮನ್ ಪ್ರೌಢಶಾಲೆಯಲ್ಲಿ ಬೆಳಗ್ಗೆ 7-30 ರಿಂದ ಸಂಜೆ 4 ಗಂಟೆಯವರೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆ ಗುರುಸ್ಪಂದನ ಹಾಗೂ ಸ್ವಾಭಿಮಾನಿ ಶಿಕ್ಷಕರ ಬಣಗಳಿಂದ ಬಿರುಸಿನ ಪ್ರಚಾರ ನಡೆದಿದೆ.
ವೈಯಕ್ತಿಕ ವರ್ಚಸ್ಸೇ ಮುಖ್ಯ: ಅವಿರೋಧ ಆಯ್ಕೆಗೆ ಕೆಲವು ಶಿಕ್ಷಕರು ಒಪ್ಪಲಿಲ್ಲ. ಚುನಾವಣೆ ನಡೆಸಿಯೇ ಪದಾಧಿಕಾರಿಗಳ ಆಯ್ಕೆ ಆಗಲಿ ಎಂಬ ನಿರ್ಧಾರ ಮಾಡಿದ್ದರಿಂದ ಅನಿವಾರ್ಯವಾಗಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಎರಡೂ ಬಣದವರು ಪ್ರಚಾರ ನಡೆಸಿದ್ದಾರೆ. ತಮ್ಮವರ ಮೂಲಕ ಪರಿಚಿತ ಶಿಕ್ಷಕರಿಗೆ ಫೋನ್ ಮಾಡಿಸಿ ಮತ ಹಾಕುವಂತೆ ತಿಳಿಸುತ್ತಿದ್ದಾರೆ.
ಮನೆ ಮನೆಗೆ ತೆರಳಿ ಎರಡೂ ಬಣಗಳಿಂದ ಮತಯಾಚನೆ: ಶಿಕ್ಷಕರು, ಸ್ಪರ್ಧಿಸಿರುವ ಅಭ್ಯರ್ಥಿಗಳು ಶಿಕ್ಷಕರ ಮನೆ ಮನೆಗಳಿಗೆ ತೆರಳಿ ಮತ ಯಾಚಿಸುವ ಮೂಲಕ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಮೀರಿಸಿದ್ದಾರೆ. 2020-25ನೇ ಸಾಲಿನ ತಾಲೂಕಾ ಶಿಕ್ಷಕರ ಕಾರ್ಯಕಾರಿ ಸಮಿತಿಗೆ 10 ಮಂದಿ ಪುರುಷರು, ಐವರು ಮಹಿಳಾ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕಿದೆ. ಇದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು, ತಾಲೂಕು ಪ್ರಧಾನ ಕಾರ್ಯದರ್ಶಿ, ಸಹ ಕಾರ್ಯದರ್ಶಿಗಳು, ಖಜಾಂಚಿ, ಸಂಘಟನಾ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಬೇಕಿದೆ.