ಮುದ್ದೇಬಿಹಾಳ(ವಿಜಯಪುರ):ತಂದೆಯ ಅಗಲಿಕೆಯ ನೋವಿನಲ್ಲೂ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಯೊಬ್ಬ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದು, ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ತಂದೆಯ ಸಾವಿನ ನೋವಲ್ಲೂ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಫಸ್ಟ್ ಕ್ಲಾಸ್‌ನಲ್ಲಿ ಪಾಸ್!
ಮುದ್ದೇಬಿಹಾಳದಲ್ಲಿ ವಿದ್ಯಾರ್ಥಿಯೊಬ್ಬ ತಂದೆಯ ಅಗಲಿಕೆಯ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಇದೀಗ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ.
ಎಸ್.ಡಿ.ಬಿರಾದಾರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಪಕ್ಕದ ತಾಳಿಕೋಟಿ ತಾಲೂಕಿನ ಪೀರಾಪೂರ ಗ್ರಾಮದ ಪರಶುರಾಮ ಸಿದ್ದಪ್ಪ ಹರಿಜನ (ಸಾಗರ) ಎಂಬಾತ ತನ್ನ ತಂದೆ ಸಾವನ್ನಪ್ಪಿದ ದಿನದಂದು ಪರೀಕ್ಷೆ ಬರೆದಿದ್ದ. ಇದೀಗ ವಿದ್ಯಾರ್ಥಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 500 ಅಂಕ ಪಡೆದುಕೊಂಡಿದ್ದಾನೆ.
ಪರಶುರಾಮನ ತಂದೆ ಸಿದ್ದಪ್ಪ ಜುಲೈ 1ರಂದು ಹೊಲಕ್ಕೆ ಒಡ್ಡು ಕಟ್ಟಲು ಹೋದ ವೇಳೆ ಹಾವು ಕಚ್ಚಿ ಮೃತಪಟ್ಟಿದ್ದರು. ಆದರೆ ಪರೀಕ್ಷೆ ಬರೆಯಲು ಇದ್ದ ಅವಕಾಶವನ್ನು ಹಾಳು ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಗ್ರಾಮದ ಮುಖಂಡ ಸುರೇಶಬಾಬುಗೌಡ ಪೀರಾಪೂರ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಸಹಕಾರ ನೀಡಿದ್ದರು. ಪರೀಕ್ಷೆ ಮುಗಿಸಿಕೊಂಡು ವಿದ್ಯಾರ್ಥಿ ಬಂದ ಬಳಿಕ ತಂದೆಯ ಅಂತ್ಯ ಸಂಸ್ಕಾರ ಮಾಡಲಾಗಿತ್ತು.