ಮುದ್ದೇಬಿಹಾಳ (ವಿಜಯಪುರ) : "ತಾಲೂಕಿನ ತಂಗಡಗಿ ಗ್ರಾಮದಲ್ಲಿ ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ, ನೂತನ ಕಟ್ಟಡಗಳ ಅಡಿಗಲ್ಲು ಸಮಾರಂಭ ಹಾಗೂ ಹಡಪದ ಸಮಾಜದ ರಾಜ್ಯಮಟ್ಟದ ಜನಜಾಗೃತಿ ಸಮಾವೇಶವನ್ನು ಫೆ.1 ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ" ಎಂದು ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಶ್ರೀಗಳು ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ನಡೆಸಿ ಅವರು ಮಾತನಾಡಿದರು.
"ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದಗ ತೋಂಟದಾರ್ಯಮಠದ ಜಗದ್ಗುರು ಸಿದ್ದರಾಮ ಶ್ರೀ, ಇಲಕಲ್ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಶ್ರೀ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀ, ಹುಲಸೂರಿನ ಶಿವಾನಂದ ಶ್ರೀ, ಬೀದರ್‌ನ ಬೆಲ್ದಾಳ ಶರಣರು, ಹೊಸದುರ್ಗದ ಪುರುಷೋತ್ತಮಾನಂದಪುರಿ ಶ್ರೀ, ಭೋವಿಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಚಿತ್ರದುರ್ಗದ ಕುಂಚಿಟಿಗ ಮಠದ ಶಾಂತವೀರ ಶ್ರೀ, ಕಾಗಿನೆಲೆ ಗುರುಪೀಠದ ಈಶ್ವರಾನಂದಪುರಿ ಶ್ರೀ, ವೇಮನ ಗುರುಪೀಠದ ವೇಮಾನಂದಪುರಿ ಶ್ರೀ, ಅಣ್ಣಿಗೇರಿಯ ಶಿವಕುಮಾರ ಶ್ರೀ, ತೆಲಸಂಗದ ಬಸವಕುಂಬಾರ ಗುಂಡಯ್ಯ ಶ್ರೀ, ಹಂಸನೂರಿನ ಬಸವರಾಜೇಂದ್ರ ಶ್ರೀ, ಇರಕಲ್ಲದ ಬಸವಪ್ರಸಾದ ಶರಣರು, ಕೊರಟಗೇರಿಯ ಮಹಾಲಿಂಗ ಶ್ರೀ, ಅಥಣಿ ಶಿವಬಸವ ಶ್ರೀ, ದಾವಣಗೆರೆ ಬಸವಪ್ರಭು ಶ್ರೀಗಳು ವಹಿಸುವರು" ಎಂದು ಅವರು ತಿಳಿಸಿದರು.
"ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕರು, ಸ್ವಾಗತ ಸಮಿತಿ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ವಹಿಸುವರು. ಈ ಸಂದರ್ಭದಲ್ಲಿ ಹಡಪದ ಸಮಾಜವನ್ನು ಎಸ್ಸ್ಟಿ ಗೆ ಸೇರ್ಪಡೆ ಮಾಡಬೇಕು. ಸಮಾಜದ ಅಭಿವೃದ್ಧಿಗೆ ನಿಗಮ, ಮಂಡಳಿ ಸ್ಥಾಪನೆ ಮಾಡಬೇಕು ಎಂಬುದೂ ಸೇರಿದಂತೆ ಸಮಾಜದ ವಿವಿಧ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತರಲಾಗುತ್ತದೆ" ಎಂದು ಹೇಳಿದರು.