ವಿಜಯಪುರ:ಪದೇ ಪದೆ ಶಾಸಕರ ಅನುದಾನ ಹಿಂಪಡೆಯುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಟೀಕಿಸಿದ್ದಾರೆ.
ಶಾಸಕರ ಅನುದಾನ ಬಿಡುಗಡೆ ಮಾಡದ ರಾಜ್ಯ ಸರ್ಕಾರ ದಿವಾಳಿಯಾಗಿದೆ: ಎಂ.ಬಿ.ಪಾಟೀಲ್ ನಗರದ ಶಿವಾಜಿ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೋವಿಡ್ ಪರಿಸ್ಥಿತಿಯ ನೆಪ ಹೇಳಿ ರಾಜ್ಯ ಸರ್ಕಾರ ಶಾಸಕರ ಅನುದಾನ ಕಡಿತಗೊಳಿಸುತ್ತಿದೆ. ಇದೇ ವಿಷಯವನ್ನು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ಸರ್ಕಾರದ ಶಾಸಕರೇ ಹೇಳುವಾಗ ನಾನೇನು ಹೇಳಲಿ ಎಂದು ಪ್ರಶ್ನಿಸಿದರು.
ನನ್ನ ಮತಕ್ಷೇತ್ರದಲ್ಲಿನ ಎರಡು ಸಮುದಾಯ ಭವನಕ್ಕೆ ಮಂಜೂರಾಗಿದ್ದ ಅನುದಾನ ಹಿಂದಕ್ಕೆ ಪಡೆದುಕೊಂಡಿದ್ದಾರೆ. ಶಾಸಕರ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಇಂತಹ ಪರಿಸ್ಥಿತಿ ರಾಜ್ಯ ಸರ್ಕಾರಕ್ಕೆ ಎದುರಾಗಿದೆ ಎಂದರೆ ಸರ್ಕಾರ ದಿವಾಳಿಯಾಗಿದೆ ಎಂದರ್ಥ ಎಂದರು.
ನೀರಾವರಿ ಯೋಜನೆಗಳ ಕುರಿತು ಕೆಲವರು ಮಾತನಾಡುತ್ತಿದ್ದಾರೆ. ನೀರಾವರಿ ಯೋಜನೆಗೆ 10, 20 ಸಾವಿರ ಕೋಟಿ ರೂ ಹಣ ಬಿಡುಗಡೆಯಾಗಿದೆಯೇ ಎಂಬರ್ಥದಲ್ಲಿ ಹೇಳುತ್ತಿದ್ದಾರೆ. ಜನವರಿಯಲ್ಲಿ ಇದಕ್ಕೆ ತಾವು ತಕ್ಕ ಉತ್ತರ ನೀಡುವುದಾಗಿ ಹೇಳಿದರು.
ಸೂಪರ್ ಸಿಎಂ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೂಪರ್ ಸಿಎಂ ಅಂತಾ ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳನ್ನು ನೋಡಿದ್ದೇನೆ. ವಿನಾ ಕಾರಣ ತಾವು ಟೀಕೆ ಮಾಡಲು ಹೋಗುವದಿಲ್ಲ. ಜನರು ಹಾಗೂ ಬಿಜೆಪಿಯ ಮುಖಂಡರು ಅರಿತುಕೊಳ್ಳಬೇಕು ಎಂದರು.