ವಿಜಯಪುರ: ಗುಮ್ಮಟನಗರಿಯ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವರ ಜಾತ್ರೆಯನ್ನು ಈ ವರ್ಷ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಮಕರ ಸಂಕ್ರಾಂತಿಯಂದು ಆಚರಿಸಲಾಗುತ್ತಿರುವ ಸಿದ್ದೇಶ್ವರ ಶ್ರೀ ಜಾತ್ರೆಯನ್ನು ಈ ಬಾರಿ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುವುದು ಎಂದರು.
ಸರಳವಾಗಿ ಸಿದ್ದೇಶ್ವರ ದೇವರ ಜಾತ್ರೆ : ಯಾವುದೇ ಮನೋರಂಜನೆ ಕಾರ್ಯಕ್ರಮ, ಆಡಂಬರದ ಕಾರ್ಯಕ್ರಮ, ಸುಡು ಮದ್ದು ಸೇರಿದಂತೆ ಪ್ರತಿ ವರ್ಷ ನಡೆಸುವ ಕಾರ್ಯಕ್ರಮ ಈ ಬಾರಿ ಇಲ್ಲ. ಕೇವಲ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು. ಕುಸ್ತಿ ಮತ್ತು ಭಾರ ಎತ್ತುವ ಸ್ಪರ್ಧೆ ಹೊರತು ಪಡಿಸಿ ಬೇರೆ ಯಾವುದೇ ಮನೋರಂಜನೆ ಕಾರ್ಯಕ್ರಮಗಳು ನಡೆಯುವುದಿಲ್ಲ. ಕೇವಲ ಭಜನೆ, ಭಕ್ತಿಗೀತೆಗಳ ನಮನ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.
ಜನವರಿ 12ರಿಂದ 17ರವರೆಗೆ ಜಾತ್ರಾ ಮಹೋತ್ಸವ: ಜಾತ್ರಾ ಮಹೋತ್ಸವ ಜ. 12 ರಿಂದ ಜ. 17ರವರೆಗೆ ನಡೆಯಲಿದೆ. ದೇವಸ್ಥಾನ ಆವರಣದಲ್ಲಿರುವ ಗೋವುಗಳಿಗೆ ಪೂಜೆ ನೆರವೇರಿಸುವ ಮೂಲಕ ಆರಂಭಗೊಳ್ಳಲಿದೆ. ನಂತರ ನಂದಿ ಧ್ವಜಗಳಿಗೆ ಸಂಪ್ರದಾಯ ಪೂಜೆ ನಡೆಯಲಿದೆ. ಜ.13ರಂದು ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ ಕುರಿತು ನುಡಿನಮನ, ಭಜನಾ ಕಾರ್ಯಕ್ರಮ ನಡೆಯಲಿದೆ ಎಂದರು.
ನಂತರ ನಂದಿ ಧ್ವಜಗಳ ಉತ್ಸವದ ಜೊತೆ 770 ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ ನೇರವೇರಲಿದೆ. ಜ.14ರಂದು ಸಂಕ್ರಮಣ ಭೋಗಿ, ವಚನ ಸಂಗೀತ, ಗೊಂದಳಿ ಹಾಡುಗಳ ಕಾರ್ಯಕ್ರಮ ನಡೆಯಲಿವೆ. ಜ.15ರಂದು ಸಂಕ್ರಮಣ ಆಚರಣೆ ಇದ್ದು, ಅಂದು ಸಾಂಪ್ರದಾಯಿಕ ನಂದಿ ಧ್ವಜಗಳ ಮೆರವಣಿಗೆ, ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ತಿಳಿಸಿದರು. ಜ.16ರಂದು ಜಾತ್ರಾ ಮಹೋತ್ಸವದಲ್ಲಿ ನಂದಿ ಮೆರವಣಿಗೆ ನಡೆಯಲಿದೆ. ಜ.17ರಂದು ಭಾರ ಎತ್ತುವ ಸ್ಪರ್ಧೆ, ಕುಸ್ತಿ ಸ್ಪರ್ಧೆಯೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದರು.