ವಿಜಯಪುರ: ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಯಾರದೇ ಹೆಸರು ಬಂದರೂ ಅವರು ರಾಜೀನಾಮೆ ನೀಡಬೇಕು. ಈ ಸಂಬಂಧ ನಾನು ಪಕ್ಷದ ಮುಖಂಡ, ಮಾಜಿ ಸಂಸದ ಉಗ್ರಪ್ಪನ ಜೊತೆಗೆ ಮಾತನಾಡಿಲ್ಲಾ, ನಂತರ ಮಾತಾಡ್ತೇನೆ ಎಂದು ಪಿಎಸ್ಐ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಂಗಾಪುರ ಎಸ್ ಎಚ್ ಗ್ರಾಮದ ಸಿದ್ಧಲಿಂಗೇಶ್ವರ ಕಮರಿ ಮಠದ ಜಾತ್ರಾ ಮಹೋತ್ಸವ ಹಾಗೂ ಯಾತ್ರಿ ನಿವಾಸ ಉದ್ಘಾಟನೆಗೂ ಮುನ್ನ ಮಾಧ್ಯಮದವರೊಂದಿಗೆ ಈ ಕುರಿತು ಮಾತನಾಡಿದರು. ಇದೇ ವೇಳೆ ಎಂಇಎಸ್ ನಾಯಕರಿಗೂ ಟಾಂಗ್ ಕೊಟ್ಟರು. ಅಖಂಡ ಮಹಾರಾಷ್ಟ್ರ ನಕ್ಷೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಂಇಎಸ್ನವರ ಉದ್ಧಟತನವನ್ನು ಸರ್ಕಾರ ಹತ್ತಿಕ್ಕಬೇಕು. ಅವರು ಬಾಲ ಬಿಚ್ಚೋಕೆ ಬಿಡಬಾರದು. ಮಹಾರಾಷ್ಟ್ರ ವಿವಾದ ವಿಚಾರ ಮಹಾಜನ್ ವರದಿಯಲ್ಲಿ ಈಗಾಗಲೇ ಇತ್ಯರ್ಥವಾಗಿದೆ. ಈಗ ರಾಜಕಾರಣಕ್ಕಾಗಿ ಕ್ಯಾತೆ ತೆಗೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.