ವಿಜಯಪುರ: ದ್ರಾಕ್ಷಿ, ಲಿಂಬೆ ಬೆಳೆಗೆ ರಾಜ್ಯದಲ್ಲಿ ಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆಯಲ್ಲಿ ಈಗ ಸೀತಾಫಲ ಹಣ್ಣು ಬೆಳೆಯುವತ್ತ ಅನ್ನದಾತರು ಚಿತ್ತ ಹರಿಸಿದ್ದಾರೆ. ಕಡಿಮೆ ಬಂಡವಾಳ ಹಾಗೂ ಯಾವುದೇ ಕೀಟನಾಶಕ ಔಷಧಿ, ರಾಸಾಯನಿಕ ಗೊಬ್ಬರ ಉಪಯೋಗಿಸದೆಯೇ ಕೇವಲ ತೋಟದಲ್ಲಿ ದೊರೆಯುವ ಗೋಮೂತ್ರ, ತಿಪ್ಪೆಗೊಬ್ಬರ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಸೀತಾಫಲ ಹಣ್ಣು ಬೆಳೆಯುತ್ತಿದ್ದು ದ್ರಾಕ್ಷಿ ಮೇಲಿನ ವ್ಯಾಮೋಹ ಮರೆತು ಕಷ್ಟದಾಯಕವಲ್ಲದ ಹಣ್ಣು ಬೆಳೆದು ಆರ್ಥಿಕವಾಗಿ ರೈತರು ಸಬಲರಾಗುತ್ತಿದ್ದಾರೆ.
ಇದಕ್ಕೆ ನಿವೃತ್ತ ಶಿಕ್ಷಕರೊಬ್ಬರ ಯಶೋಗಾಥೆ ಉದಾಹರಣೆ. ಇವರ ಸೀತಾಫಲ ಕೃಷಿ ನೋಡಿ ಅಕ್ಕಪಕ್ಕದ ರೈತರಿಗೂ ಸಹ ಇದೇ ಬೆಳೆ ಬೆಳೆಯಲು ಪ್ರೇರಣೆ ದೊರೆತಿದೆ. ವಿಜಯಪುರ ತಾಲೂಕಿನ ಹೆಗಡಿಹಾಳ ಗ್ರಾಮದ ನಿವೃತ್ತ ಶಿಕ್ಷಕ ಕಾಶಿರಾಯಗೌಡ ಬಿರಾದಾರ ಎಂಬುವರು ತಮ್ಮ 12 ಎಕರೆ ತೋಟಗಾರಿಕೆ ಜಮೀನಿನ ಪೈಕಿ 4 ಎಕರೆಯಲ್ಲಿ ಎರಡು ವರ್ಷದ ಹಿಂದೆ ಬಾರ್ಸಿಯಿಂದ ಸೀತಾಫಲ ಸಸಿ ತಂದು ನೆಟ್ಟಿದ್ದರು.
ಎರಡು ವರ್ಷಗಳ ಕಾಲ ಸಾವಯವ ಕೃಷಿಯಿಂದ ಡ್ರಿಪ್ ಮೂಲಕ ನೀರುಣಿಸಿದ್ದರು. ಈಗ ಚಾಟ್ನಿಗೆ ಮಾಡಿಸಿದ್ದು, 4 ಎಕರೆ ಭೂಮಿಯಲ್ಲಿ ಫಲವತ್ತಾದ ಸಾವಿರಕ್ಕಿಂತ ಹೆಚ್ಚು ಗಿಡಗಳು ಬೆಳೆದು ನಿಂತಿವೆ. ಮೊದಲ ಕಂತಿನಲ್ಲಿ ಲಕ್ಷಾಂತರ ರೂ. ಗಳಿಸಿದ್ದ ಇವರು ಈಗ ಎರಡನೇ ಹಂತದ ಹಣ್ಣು ಕೀಳುತ್ತಿದ್ದಾರೆ. ಈಗಾಗಲೇ ಶೇ.80ರಷ್ಟು ಹಣ್ಣು ತೆಗೆದಿದ್ದು, ಸುಮಾರು 4 ಟನ್‌ನಷ್ಟು ಸೀತಾಫಲ ಹಣ್ಣು ಬಂದಿದೆ. ಇದನ್ನು ಬೆಂಗಳೂರು, ಮೈಸೂರು, ಹೈದ್ರಾಬಾದ್, ವಿಜಯಪುರ ಸೇರಿದಂತೆ ವಿವಿಧೆಡೆ ಮಾರಾಟ ಮಾಡಲಾಗಿದೆ.
ಸದ್ಯ ಬೆಂಗಳೂರು, ಮೈಸೂರಿನಲ್ಲಿ ಸೀತಾಫಲ ಹಣ್ಣಿಗೆ ಹೆಚ್ಚಿನ ಡಿಮ್ಯಾಂಡ್ ಇದ್ದು, ಪ್ರತಿ ಕೆಜಿಗೆ 120 ರಿಂದ 160 ರೂ.ವರೆಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮದ್ಯವರ್ತಿ ಹಾಗೂ ಸಾರಿಗೆ ವೆಚ್ಚ ತೆಗೆದರೆ ಪ್ರತಿ ಕೆಜಿಗೆ 100ರೂ. ಉಳಿಯುತ್ತದೆ ಎನ್ನುತ್ತಾರೆ ನಿವೃತ್ತ ಶಿಕ್ಷಕನ ಪುತ್ರ ನಾನಾಗೌಡ ಬಿರಾದಾರ.