ಮುದ್ದೇಬಿಹಾಳ: ಈ ದೇಶದಲ್ಲಿ ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಹಕ್ಕು ಜೀವಂತವಾಗಿರುತ್ತದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಲ್ಲಿ ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಅವರ 130ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, 130 ಕೋಟಿ ಜನರಿಗೆ ಮಾರ್ಗದರ್ಶಕವಾದ ಸಂವಿಧಾನ ಬರೆದಿರುವ ಅಂಬೇಡ್ಕರ್ ಅವರ ಆದರ್ಶಗಳು ಎಲ್ಲರಿಗೂ ಮಾದರಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಪುತ್ಥಳಿ ಸಣ್ಣದಾಗಿದೆ ಎಂದು ವಿವಿಧ ದಲಿತಪರ ಸಂಘಟನೆಯ ನಾಯಕರು ತಿಳಿಸಿದ್ದು ಎತ್ತರ ಹಾಗೂ ಸುಂದರವಾದ ಮೂರ್ತಿಯನ್ನು ಪ್ರತಿಷ್ಠಾಪಿಸಲು ತಗಲುವ ವೆಚ್ಚ ವೈಯಕ್ತಿಕವಾಗಿ ಭರಿಸುವುದಾಗಿ ಹೇಳಿದರು.
ಮುಖಂಡ ಹರೀಶ ನಾಟೀಕಾರ ಮಾತನಾಡಿ, ಕೋವಿಡ್-19 ಹಿನ್ನೆಲೆ ಅಂಬೇಡ್ಕರ್ ಜಯಂತಿ ಅತೀ ಸರಳವಾಗಿ ಆಚರಿಸಲಾಗಿದೆ. ಪಟ್ಟಣದಲ್ಲಿರುವ ಅಂಬೇಡ್ಕರ್ ಮೂರ್ತಿ ಕಿರಿದಾಗಿದ್ದು ಅದನ್ನು ಬದಲಿಸಿ ಬೇರೊಂದು ಎತ್ತರದ ಪುತ್ಥಳಿ ಪ್ರತಿಷ್ಠಾಪಿಸಲು ಪ್ರಗತಿಪರರ ಸಮಿತಿ ರಚಿಸಿ ಶಾಸಕರ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.
ಮಾಜಿ ಶಾಸಕರಿಂದಲೂ ಅಂಬೇಡ್ಕರ್‌ಗೆ ನಮನ: ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಅಂಬೇಡ್ಕರ್ ಅವರು ಕಂಡಿದ್ದ ಕನಸು ನನಸಾಗಬೇಕು ಎಂದರು.