ವಿಜಯಪುರ: ಜಿಲ್ಲೆಯಲ್ಲಿ ಆರು ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಪಾಸಿಟಿವ್ ಪ್ರಕರಣದ 5 ಜನರ ರಕ್ತ ಸಂಬಂಧಿಗಳು ನಗರದ ಚಪ್ಪರಬಂದ್ ಬಡಾವಣೆಯಲ್ಲಿ ಹಾಗೂ ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದ್ದಾರೆ.
ಚಪ್ಪರಬಂದ್ ಬಡಾವಣೆಯಲ್ಲೇ ಇದ್ದಾರಂತೆ ಐವರು ಪಾಸಿಟಿವ್ ಸಂಬಂಧಿಗಳು
ವಿಜಯಪುರದಲ್ಲಿ ಮಧ್ಯಾಹ್ನ 60 ವರ್ಷದ ಮಹಿಳೆಗೆ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ನಂತರ ಸಾಯಂಕಾಲ ಐವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಾಹ್ನ 60 ವರ್ಷದ ಮಹಿಳೆಗೆ ಪಾಸಿಟಿವ್ ದೃಢಪಟ್ಟಿತ್ತು. ನಂತರ ಸಾಯಂಕಾಲ ಐವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದರು. ಇದೀಗ ಪಾಸಿಟಿವ್ ಬಂದ ಐವರ ಪರಸ್ಪರ ಸಂಬಂಧಿಕರು, ಓರ್ವ ವ್ಯಕ್ತಿ, ಓರ್ವ ಯುವತಿ, ಇಬ್ಬರು ಬಾಲಕರು ಹಾಗೂ ಓರ್ವ ಬಾಲಕಿಗೆ ಪಾಸಿಟಿವ್ ದೃಢಪಟ್ಟಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ಐವರ ಜೀವಕ್ಕೆ ಹಾನಿಯಿಲ್ಲ. ಐವರ ಮನೆಗಳು ನಗರದ ಚಪ್ಪರ ಬಂದ್ ಕಾಲೊನಿಯಲ್ಲಿ ಅಕ್ಕಪಕ್ಕದಲ್ಲೇ ಇವೆ. ಇವರೆಲ್ಲರ ಸಂಪರ್ಕದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.
ಇವರೆಲ್ಲರ ಜೊತೆಗೆ ಪ್ರಥಮ ಹಾಗೂ ದ್ವಿತೀಯ ಹಂತದ ಸಂಪರ್ಕ ಇರುವ ಒಟ್ಟು 160 ಜನರ ಮೇಲೆ ನಿಗಾ ಇರಿಸಲಾಗಿದೆ. 160 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಲ್ಯಾಬ್ಗೆ ಇಂದು ರಾತ್ರಿ ಕಳುಹಿಸಲಾಗುತ್ತದೆ. ನಾಡಿದ್ದು ವರದಿ ಬರುವ ನಿರೀಕ್ಷೆಯಿದೆ ಎಂದರು. ಸದ್ಯ 60 ವರ್ಷದ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ವಲ್ಪ ಪ್ರಮಾಣದ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಈಗ ಚಿಕಿತ್ಸೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಇವರ ಪತಿ ಮೃತಪಟ್ಟಿರುವುದನ್ನ ಡಿಸಿ ದೃಢ ಪಡಿಸಿದ್ದಾರೆ. ಪತಿಯ ರಕ್ತದ ಮಾದರಿ ಪರೀಕ್ಷೆ ಫಲಿತಾಂಶ ಬರುವುದು ಬಾಕಿ ಇದೆ.