ಕರ್ನಾಟಕ

karnataka

ETV Bharat / state

ಕೊರೊನಾ ಗಂಟಲು ದ್ರವ ಪರೀಕ್ಷಾ ಲ್ಯಾಬ್​​ ಮಂಜೂರಾತಿ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಸ್ತಾಪ: ಶಶಿಕಲಾ ಜೊಲ್ಲೆ

ವಿಜಯಪುರದ ನೂತನ ಪ್ರವಾಸಿ ಮಂದಿರದಲ್ಲಿಂದು ವಿರೋಧ ಪಕ್ಷದ ನಾಯಕರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಕೋವಿಡ್-19 ಮುನ್ನೆಚ್ಚರಿಕೆ ಕುರಿತು ಸಚಿವೆ ಶಶಿಕಲಾ ಜೊಲ್ಲೆ ಸಭೆ ನಡೆಸಿದರು.

Meeting on Covid-19 Precautions
ಕೋವಿಡ್-19 ಮುನ್ನೆಚ್ಚರಿಕೆ ಕುರಿತು ಸಭೆ ನಡೆಸಿದ ಸಚಿವೆ ಶಶಿಕಲಾ ಜೊಲ್ಲೆ

By

Published : Apr 19, 2020, 11:56 PM IST

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರು ದೃಢಪಟ್ಟ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಗೆ ಕೊರೊನಾ ಗಂಟಲು ದ್ರವ ಪರೀಕ್ಷಾ ಲ್ಯಾಬ್ ಮಂಜೂರಾತಿ ಕುರಿತು ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ನಗರದ ನೂತನ ಪ್ರವಾಸಿ ಮಂದಿರದಲ್ಲಿಂದು ವಿರೋಧ ಪಕ್ಷದ ನಾಯಕರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಕೋವಿಡ್-19 ಮುನ್ನೆಚ್ಚರಿಕೆ ಕುರಿತು ಸಭೆ ನಡೆಸಿದ ಅವರು, ಕೋವಿಡ್-19ಗೆ ಸಂಬಂಧಪಟ್ಟಂತೆ ರೋಗಿಗಳ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿ ಬರಲು ವಿಳಂಬವಾಗುತ್ತಿರುವ ಬಗ್ಗೆ ಗಮನಿಸಿದ್ದು, ಈಗಾಗಲೇ ಜಿಲ್ಲಾಸ್ಪತ್ರೆ ಮತ್ತು ಬಿ.ಎಲ್.ಡಿ.ಇ ಸಂಸ್ಥೆ ಮೂಲಕ ಟೆಸ್ಟಿಂಗ್ ಲ್ಯಾಬ್ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಸಚಿವರು ತಿಳಿಸಿದರು.

ಕೊರೊನಾ ಸೋಂಕಿತರನ್ನು ದೃಢಪಡಿಸಲು ಸ್ವ್ಯಾಬ್ ಟೆಸ್ಟಿಂಗ್ ಲ್ಯಾಬ್‌ಗಳನ್ನು ಈಗಾಗಲೇ ಕಲಬುರಗಿ, ಹುಬ್ಬಳ್ಳಿ, ಬಳ್ಳಾರಿ, ಗದಗ ಹಾಗೂ ಬೆಳಗಾವಿಗಳಲ್ಲಿ ಸ್ಥಾಪಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೂ 21 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಇಲ್ಲಿಯೂ ಲ್ಯಾಬ್‌ವೊಂದನ್ನು ಸ್ಥಾಪಿಸುವಂತೆ ಶಾಸಕರು ತಿಳಿಸಿದ್ದು, ಈ ಕುರಿತು ವಿಶೇಷ ಗಮನ ಹರಿಸುವುದಾಗಿ ಹೇಳಿದರು. ಇನ್ನು ರ‍್ಯಾಪಿಡ್ ಟೇಸ್ಟಿಂಗ್, ಪ್ಲಾಸ್ಮಾ ಥೇರಪಿ ಕುರಿತು ಅವಶ್ಯಕ ಪರಿಕರಗಳ ಪೂರೈಕೆಯ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವುದಾಗಿಯೂ ಅವರು ತಿಳಿಸಿದರು.

ಕೋವಿಡ್-19 ಸೋಂಕಿತರು ದೃಢಪಟ್ಟ ಪ್ರದೇಶಗಳನ್ನು ಈಗಾಗಲೇ ಕಂಟೈನ್​ನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ. ಅದರಂತೆ ಕ್ಲಸ್ಟರ್ ವಲಯವನ್ನು ಸಹ ಘೋಷಿಸಿದ್ದು, ಅಕ್ಕಿ, ಗೋಧಿ ಹೊರತುಪಡಿಸಿ ಇನ್ನಿತರ ದಿನಸಿ ವಸ್ತುಗಳು, ತರಕಾರಿ, ಹಣ್ಣು ಸಮರ್ಪಕ ಪೂರೈಕೆಗೆ ಕಾರ್ಯಯೋಜನೆ ರೂಪಿಸುವಂತೆ ವಿರೋಧ ಪಕ್ಷದ ನಾಯಕರಾದ ಎಸ್.ಆರ್.ಪಾಟೀಲ, ಶಾಸಕ ಎಂ.ಬಿ.ಪಾಟೀಲ ಮತ್ತು ಬಸನಗೌಡ ಪಾಟೀಲ ಯತ್ನಾಳ ಅವರು ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಈ ಕುರಿತೂ ಸಹ ಸಚಿವ ಸಂಪುಟದಲ್ಲಿ ಗಮನಕ್ಕೆ ತರುವುದಾಗಿ ಸಚಿವರು ತಿಳಿಸಿದರು.

ಕೊರೊನಾ ಸೋಂಕಿತರು ನಗರದಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ರೈತರು ಕೂಡ ಆತಂಕಕ್ಕೆ ಒಳಗಾಗಿ ತರಕಾರಿ, ಹಣ್ಣು ಮಾರಾಟಕ್ಕೆ ಬರದೇ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ತಕ್ಷಣ ಆಯಾ ತಾಲೂಕುಗಳ ಪಿಡಿಒಗಳು ರೈತರಿಗೆ ಅವರ ವಾಹನ ಮತ್ತು ವಾಹನ ಚಾಲಕರಿಗೆ ಗುರುತಿನ ಚೀಟಿ ದೊರಕಿಸುವ ಮೂಲಕ ವಿಜಯಪುರಕ್ಕೆ ತರಕಾರಿ, ಹಣ್ಣು ಹಂಪಲು ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಅದರಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಹಕಾರ ನೀಡಲಿದ್ದು, ರೈತರು ಯಾವುದೇ ಆತಂಕವಿಲ್ಲದೆ ನಗರಕ್ಕೆ ಆಗಮಿಸಬಹುದಾಗಿದೆ. ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಡಿಒಗಳಿಗೆ ಇನ್ನೂ ಚುರುಕಾಗಿ ಕಾರ್ಯನಿರ್ವಹಿಸುವಂತೆ ನಿರ್ದೇಶಿಸಲು ಶಾಸಕ ಶಿವಾನಂದ ಪಾಟೀಲ ತಿಳಿಸಿದ ಹಿನ್ನೆಲೆಯಲ್ಲಿ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ABOUT THE AUTHOR

...view details