ವಿಜಯಪುರ :ಜಿಲ್ಲೆಯ 15,318 ಆರೋಗ್ಯ ಕಾರ್ಯಕರ್ತರಿಗೆ ಪ್ರಥಮ ಹಂತದಲ್ಲಿ ನೀಡಲು ಉದ್ದೇಶಿಸಲಾಗಿರುವ ಕೋವಿಡ್-19 ಲಸಿಕೆಯ ಪೂರ್ವಾಭ್ಯಾಸ ಶಾಂತಿಯುತ ಮತ್ತು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಖಾಸಗಿ 8910 ಹಾಗೂ ಸರ್ಕಾರಿ 6408 ಸೇರಿದಂತೆ ಒಟ್ಟು 15,318 ಆರೋಗ್ಯ ಕಾರ್ಯಕರ್ತರಿಗೆ ಪ್ರಥಮ ಹಂತದಲ್ಲಿ ನೀಡಲು ಉದ್ದೇಶಿಸಲಾಗಿರುವ ಕೋವಿಡ್-19 ಲಸಿಕೆ ಪೂರ್ವಾಭ್ಯಾಸ ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ.
97 ಕೋಲ್ಡ್‌ಚೈನ್, ಪಾಯಿಂಟ್ಸ್ ಗುರುತಿಸಲಾಗಿದೆ. 10 AEFI ಮ್ಯಾನೇಜ್ಮೆಂಟ್ ಕೇಂದ್ರಗಳನ್ನು ಸಹ ಗೊತ್ತುಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ 113 ಲಸಿಕಾ ಸ್ಥಳಗಳನ್ನು ಗುರುತಿಸಲಾಗಿದೆ.
ಪ್ರತಿ ಲಸಿಕಾ ಕೇಂದ್ರದಲ್ಲಿ ಚುನಾವಣೆ ಮಾದರಿ 5 ಸಿಬ್ಬಂದಿ, ಕೋ-ವಿನ್ ತಂತ್ರಾಂಶದಲ್ಲಿ ನೋಂದಣಿ, ಲಸಿಕೆ ನಂತರದಲ್ಲಿ ಆಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಅಬ್ಸರ್ವೇಷನ್ ಕೊಠಡಿ ಸ್ಥಾಪಿಸಿ ಪರಿಶೀಲನೆ ಮತ್ತು ಮುಂದಿನ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪೂರ್ವಾಭ್ಯಾಸ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
ಹಂತ-2 ಮತ್ತು ಹಂತ-3ರಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸುವುದು, ಸರ್ಕಾರದ ನಿಯಮ ಮತ್ತು ನಿರ್ದೇಶನಗಳ ಅನ್ವಯ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಕೋವಿಡ್-19 ಲಸಿಕೆ ಲಭ್ಯವಾದ ತಕ್ಷಣ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ನಗರ ಮತ್ತು ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಗಂಟಲು ದ್ರವ ಮಾದರಿ ಪಡೆಯುವ ವ್ಯವಸ್ಥೆ ಕಲ್ಪಿಸುವ ಮೂಲಕ ಒಂದೇ ಕಡೆ ಆಗುವಂತಹ ಒತ್ತಡ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿ, ಕಳೆದ 15 ದಿನಗಳಲ್ಲಿ RT-PCR ಗಂಟಲು ದ್ರವ ಮಾದರಿ ಸಂಗ್ರಹಣೆಯಲ್ಲಿ ಶೇ.120ರಷ್ಟು ಸಾಧನೆ ಮಾಡಲಾಗಿದೆ ಎಂದು ತಿಳಿಸಿದ್ರು.
ಸಂತ್ರಸ್ತರಿಗೆ ಪರಿಹಾರ ಧನ ವಿತರಣೆ :ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಜೀವ ಹಾನಿಯಾದ 14 ಜನ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಮತ್ತು ಜಾನುವಾರು ಸಾವು-ನೋವು ಹಾಗೂ ಮನೆ ಹಾನಿಗೆ ಸಂಬಂಧಪಟ್ಟಂತೆ ಪರಿಹಾರ ವಿತರಿಸಲಾಗಿದೆ. ಕೃಷಿ ಹಾಗೂ ತೋಟಗಾರಿಕಾ ಬೆಳೆ ಹಾನಿಗೆ ಸಂಬಂಧಪಟ್ಟಂತೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.