ವಿಜಯಪುರ:ನಾಟಕ ಪ್ರದರ್ಶನದ ವೇಳೆ ದಿಢೀರ್ ಕುಸಿದು ಬಿದ್ದು ಪೋಸ್ಟ್ಮ್ಯಾನ್ ಸಾವನ್ನಪ್ಪಿರುವ ಮನಕಲಕುವ ಘಟನೆ ಗುರುವಾರ ರಾತ್ರಿ ನಡೆದಿದೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಶರಣು ಬಾಗಲಕೋಟೆ (24) ಎಂಬುವರೆ ಹೃದಯಾಘಾತದಿಂದ ಸಾವನ್ನಪ್ಪಿದ ಪೋಸ್ಟ್ಮ್ಯಾನ್ ಆಗಿದ್ದಾರೆ.
ನಾಟಕ ಪ್ರದರ್ಶನ ವೇಳೆ ಡಾನ್ಸ್ ಮಾಡಲು ವೇದಿಕೆ ಏರಿದ್ದ ಶರಣು ಕೊಟ್ಯಾಳ್ಗೆ ಹೃದಯಾಘಾತವಾಗಿದೆ. ''ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ'' ನಾಟಕ ಪ್ರದರ್ಶನ ವೇಳೆ ಈ ಘಟನೆ ನಡೆದಿದೆ. ಕೇವಲ 24 ವರ್ಷದ ಶರಣು ಬಾಗಲಕೋಟೆ ಇತ್ತೀಚೆಗೆ ಪೋಸ್ಟ್ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಗ್ರಾಮ ದೇವರ ಜಾತ್ರೆ ಹಿನ್ನೆಲೆ ನಾಟಕ ಹಮ್ಮಿಕೊಂಡಿದ್ದು, ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ ತಾನು ಸಹ ನಾಟಕದಲ್ಲಿ ಡಾನ್ಸ್ ಮಾಡಲು ವೇದಿಕೆ ಏರಿದ್ದ ಶರಣು ವಿಧಿಯಾಟಕ್ಕೆ ಪ್ರಾಣ ಕಳೆದುಕೊಂಡಿದ್ದಾನೆ. ಈ ಸಂಬಂಧ ತಿಕೋಟಾ ಪೊಲೀಸ್ ಠಾಣೆಯಲ್ಲಿ ಸಹಜ ಸಾವು ಪ್ರಕರಣ ದಾಖಲಾಗಿದೆ.
ಈ ಹಿಂದಿನ ಹೃದಯಾಘಾತ ಘಟನೆಗಳು- ಯುವತಿ ಮಲಗಿದ್ದಲ್ಲಿಯೇ ಹೃದಯಾಘಾತ:ಯುವತಿ ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಬಂಟ್ವಾಳದಲ್ಲಿ ನಡೆದಿತ್ತು. ಕಾವಳಪಡೂರು ಗ್ರಾಮದ ಮಧ್ವಗುತ್ತು ರಾಜೀವ ಶೆಟ್ಟಿ- ಮೀನಾ ದಂಪತಿಯ ಪುತ್ರಿ ಮಿತ್ರಾ ಶೆಟ್ಟಿ (23) ಮೃತರು. ಬಿ.ಸಿ. ರೋಡ್‌ನಲ್ಲಿ ಖಾಸಗಿ ಉದ್ಯೋಗದಲ್ಲಿದ್ದ ಮಿತ್ರಾ ಮಧ್ವದಲ್ಲಿ ದೊಡ್ಡಮ್ಮನ ಮನೆಯಲ್ಲಿ ತಾಯಿ ಜತೆ ವಾಸವಿದ್ದರು. ಮಂಗಳವಾರ ರಾತ್ರಿ ಊಟ ಮುಗಿಸಿ ತಾಯಿಯೊಂದಿಗೆ ಮಲಗಿದ್ದರು.
ಬೆಳಗ್ಗೆ ಹೊತ್ತು ಕಳೆದರೂ ಏಳದಿರುವುದನ್ನು ಗಮನಿಸಿದ ತಾಯಿ ಎಬ್ಬಿಸುವಾಗ ಅವರು ಮೃತಪಟ್ಟಿರುವುದು ತಿಳಿದು ಬಂದಿದೆ. ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸಾವಿಗೆ ಹೃದಯಾಘಾತವೇ ಕಾರಣವೆಂದು ವೈದ್ಯರು ದೃಢಪಡಿಸಿದ್ದರು. ಮಿತ್ರಾ ಪದವೀಧರೆಯಾಗಿದ್ದು, ಸ್ಥಳೀಯವಾಗಿ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಯುವತಿಯ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಸಂತಾಪ ಸೂಚಿಸಿದ್ದರು.
ಆಟೋ ಚಲಾಯಿಸುತ್ತಿದ್ದ ವ್ಯಕ್ತಿಗೆ ಹಠಾತ್ನೇ ಹೃದಯಾಘಾತ:ಆಟೋ ಚಲಾಯಿಸುತ್ತಿದ್ದ ವ್ಯಕ್ತಿಗೆ ಹಠಾತ್ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿರುವ ಘಟನೆ ಸಂಪಂಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಬಿಳೇಕಹಳ್ಳಿಯ ಸೋಮೇಶ್ವರ ಬಡಾವಣೆಯ ಆಟೋ ಚಾಲಕ ತಿಮ್ಮೇಶ್ (35) ಮೃತರು. ಎಂದಿನಂತೆ ಬೆಳಗ್ಗೆ ತಿಮ್ಮೇಶ್ ಅವರು ಆಟೋ ಚಲಾಯಿಸಿಕೊಂಡು ಹೋಗುವಾಗ ಹಠಾತ್ ಹೃದಯಾಘಾತವಾಗಿತ್ತು. ಕೂಡಲೇ ಅವರು ಚಲಿಸುತ್ತಿದ್ದ ಆಟೋವನ್ನು ನಿಲ್ಲಿಸಿದ್ದಾರೆ. ಕೆಲ ಕ್ಷಣ ಎದೆ ಸವರಿಸಿಕೊಂಡು ಆಟೋದಿಂದ ಕೆಳಗಿಳಿದು ಹೋಗಿದ್ದು, ಕೆಲವೇ ಕ್ಷಣಗಳಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದರು. ಆಟೋದಿಂದ ಕೆಳಗಿಳಿದು ಕೊನೆ ಬಾರಿ ನಡೆದು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ:ಮಂಗಳೂರು: ಹೃದಯಾಘಾತದಿಂದ 23 ವರ್ಷದ ಯುವತಿ ಸಾವು