ಮುದ್ದೇಬಿಹಾಳ: ಮುನ್ಸೂಚನೆ ನೀಡದೆ ಉಪ ಕಾಲುವೆಯೊಂದಕ್ಕೆ ನೀರು ಹರಿಸಿದ್ದರಿಂದ, ಕಾಲುವೆ ನೀರು ಜಮೀನಿಗೆ ನುಗ್ಗಿ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದ್ದು, ಹತ್ತಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಜಲಾವೃತಗೊಂಡಿರುವ ಘಟನೆ ತಾಲೂಕಿನ ಕುಂಟೋಜಿ ಸೀಮೆಯಲ್ಲಿ ಬರುವ ಹೂವಿನ ಹಿಪ್ಪರಗಿ ಶಾಖಾ ಉಪ ಕಾಲುವೆ ವ್ಯಾಪ್ತಿಯಲ್ಲಿ ನಡೆದಿದೆ.
ತುರ್ತು ಕ್ರಮ ಕೈಗೊಂಡ ಅಧಿಕಾರಿಗಳು: ಕುಂಟೋಜಿ ಬಳಿ ಜಮೀನುಗಳಿಗೆ ನೀರು ನುಗ್ಗಿದ ವಿಷಯ ತಿಳಿಯುತ್ತಿದ್ದಂತೆ ರೂಢಗಿ ಗ್ರಾಮದ ಬಳಿ 40ನೇ ಕಿಮೀ ಬಳಿ ಕಾಲುವೆಗೆ ಮಣ್ಣು ಹಾಕಿ ನೀರು ಸ್ಥಗಿತಗೊಳಿಸುವ ಮೂಲಕ ಕೆಬಿಜೆಎನ್‌ಎಲ್ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿದ್ದಾರೆ.
ತಾಲೂಕಿನ ಕುಂಟೋಜಿ-ಇಣಚಗಲ್ ಭಾಗದಲ್ಲಿ ಹಾಯ್ದು ಹೋಗಿರುವ ಮುಳವಾಡ ಏತ ನೀರಾವರಿ ಯೋಜನೆಯ ಹೂವಿನ ಹಿಪ್ಪರಗಿ ಶಾಖಾ ಕಾಲುವೆ ಕಿಮೀ 63ರಲ್ಲಿ ಬರುವ ಉಪ ಕಾಲುವೆಗೆ ಏಕಾಏಕಿ ಭಾರೀ ಪ್ರಮಾಣದ ನೀರು ಹರಿದು ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಸರ್ವೆ ನಂ.82/1,82/3,81/3ರಲ್ಲಿ ಬರುವ ರೈತರಾದ ದಾನಪ್ಪ ಅಂಗಡಿ, ರಾಜಶೇಖರ ಅಂಗಡಿ, ರೇಣುಕಾ ತಾಂಬ್ರೋಳ್ಳಿ ಅವರ ಜಮೀನಿಗೆ ನೀರು ನುಗ್ಗಿದೆ. ನೀರಿನಲ್ಲಿ ಮುಳುಗಿ ಒಂದು ಕುರಿ ಸಾವನ್ನಪ್ಪಿದೆ. ಹೊಕ್ರಾಣಿ, ಇಂಗಳಗೇರಿ ಭಾಗದ ಕೆಲವು ಜಮೀನುಗಳಲ್ಲಿ ಸಹ ನೀರು ನುಗ್ಗಿದ್ದು ಜೋಳ, ಕಡಲೆ, ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳು ನೀರಿನಲ್ಲಿ ನಿಂತಿವೆ.
ಜಮೀನಿಗೆ ನುಗ್ಗಿದ ಕಾಲುವೆ ನೀರು; ಕೊಚ್ಚಿ ಹೋದ ಮಣ್ಣು, ಬೆಳೆ ಜಲಾವೃತ ಈ ಕುರಿತು ಮಾತನಾಡಿದ ರೈತ ದಾನಪ್ಪ ಅಂಗಡಿ, ಕೆಬಿಜೆಎನ್‌ಎಲ್ ಅಧಿಕಾರಿಗಳು ಕಾಲುವೆಗೆ ನೀರನ್ನು ಮುನ್ಸೂಚನೆ ಇಲ್ಲದೆ ಹರಿಸಿರುವುದೇ ಈ ಎಲ್ಲ ಅನಾಹುತಕ್ಕೆ ಕಾರಣವಾಗಿದ್ದು, ನೂರಾರು ವರ್ಷಗಳಿಂದ ಸೃಷ್ಟಿಯಾಗಿರುವ ಫಲವತ್ತಾದ ಮಣ್ಣನ್ನು ತಂದು ಕೊಡಲು ಸಾಧ್ಯವೇ ? ರೈತರಿಗೆ ಮಾಹಿತಿ ಕೊಡದೆ ನೀರು ಹರಿಸುವ ಅವಶ್ಯಕತೆ ಅಧಿಕಾರಿಗಳಿಗೆ ಏನಿತ್ತು ಎಂದಿದ್ದಾರೆ. ಹಾಳಾಗಿರುವ ಜಮೀನುಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಓದಿ:ರಾಜ್ಯದಲ್ಲಿ ಮತ್ತೆ ರೂಪಾಂತರಿ ಕೊರೊನಾ ಭೀತಿ: ವಿದೇಶಿ ಪ್ರಜೆಗಳ ಮೇಲೆ ಕಟ್ಟೆಚ್ಚರ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಅನುಮತಿ ಪಡೆದು ಕಾಲುವೆಯ ಭಾಗದ ರೈತರ ಒತ್ತಾಯದ ಮೇರೆಗೆ ದನಕರುಗಳಿಗೆ, ಬೆಳೆಗಳಿಗೆ ಅನುಕೂಲವಾಗಲೆಂದು ಕಾಲುವೆಗೆ ನೀರು ಹರಿಸಿದ್ದೆವು. ಆದರೆ, ಒಂದೆರಡು ಕಡೆ ಹಳ್ಳಗಳ ಭಾಗದಲ್ಲಿ ರೈತರು ಅತಿಕ್ರಮಣ ಮಾಡಿಕೊಂಡಿದ್ದರಿಂದ ನೀರು ಹೆಚ್ಚುವರಿಯಾಗಿ ಹರಿದಿದೆ. ರೂಢಗಿ, ಆಲಕೊಪ್ಪರ ಕೆರೆಗಳಿಗೆ ನೀರು ತುಂಬಿಸಲು ಕಾಲುವೆಗೆ ನೀರು ಬಿಟ್ಟಿದ್ದೆವು. ಸದ್ಯಕ್ಕೆ ನೀರು ಮುಂದೆ ಹರಿಯುವುದನ್ನು ತಡೆದು ನಿಲ್ಲಿಸಲಾಗಿದ್ದು, ಫೆ.22 ರಂದು ಈ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋವಿಂದ ರಾಠೋಡ ತಿಳಿಸಿದ್ದಾರೆ.