ವಿಜಯಪುರ: "ವಿಜಯಪುರ ನಗರ ಸೇರಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ನೋಂದಣಿ ಮಾಡುವ ಪ್ರಕರಣಗಳು ಕಂಡು ಬಂದಿದ್ದು, ಇಂತವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು" ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಾತನಾಡಿದ ಅವರು, "ಕೆಲವರು ಆಧಾರ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮೂಲಕ ಭೂ ಮಾಲೀಕರ ಹೆಸರಿನಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ನೋಂದಣಿ ಮಾಡಿರುವ 13 ಪ್ರಕರಣಗಳನ್ನು ಈಗಾಗಲೇ ದಾಖಲಿಸಲಾಗಿದೆ. ಖೊಟ್ಟಿ ದಾಖಲೆ ಸೃಷ್ಟಿ ಮಾಡಿ, ಆಸ್ತಿಗಳನ್ನು ನೋಂದಣಿ ಮಾಡುವ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಾಂಡ್ ರೈಟರ್ಸ್ ಗುರುತಿಸಿ, ಅವರ ಬಾಂಡ್ ರೈಟರ್ಸ್ ಲೈಸೆನ್ಸ್ ರದ್ದುಗೊಳಿಸವಂತೆ" ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
"ಅದರಂತೆ ಉಪ ನೋಂದಣಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹಲವು ದಿನಗಳಿಂದ ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವರನ್ನು ಜಿಲ್ಲಾ ವ್ಯಾಪ್ತಿಯಿಂದ ತಾಲೂಕು ಮಟ್ಟಕ್ಕೆ ವರ್ಗಾವಣೆ ಮಾಡಿ, ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಕೆಲಸ ಮಾಡಲು ವರ್ಗಾವಣೆ ಮಾಡಬೇಕು. ಅಕ್ರಮ ಪ್ರಕರಣಗಳು ಕಂಡುಬಂದಲ್ಲಿ ಉಪ ನೋಂದಣಾಧಿಕಾರಿಗಳು ಜಿಲ್ಲಾ ನೋಂದಾಣಾಧಿಕಾರಿಗಳ ಅನುಮತಿ ಪಡೆದು ಸ್ಟೇಟ್ ಎಫ್ಐಆರ್ ಮಾಡಬೇಕು. ನೋಂದಣಿ ಮಾಡುವ ಸಂದರ್ಭದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ಸಬ್ ರಜಿಸ್ಟ್ರಾರ್ ಅವರಿಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ವೋಟರ್ ಐಡಿ ಹಾಗೂ ರೇಶನ್ ಕಾರ್ಡ್ ಕೂಲಂಕೂಷವಾಗಿ ಪರಿಶೀಲಿಸಲು ಲಾಗಿನ್ ಐಡಿ ನೀಡಲಾಗುವುದು. ಮೂಲ ದಾಖಲೆಗಳನ್ನು ಪರಿಶೀಲಿಸಿ ನೋಂದಣಿ ಮಾಡಲು ಕ್ರಮ ಕೈಗೊಳ್ಳಳ್ಳಿ" ಎಂದು ಸೂಚನೆ ನೀಡಿದರು.