ವಿಜಯಪುರ:ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧದ ಕಾರಣ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ ಎಚ್ ಗ್ರಾಮದಲ್ಲಿ ಸೋಮವಾರ ನಡೆದಿದೆ. ಸಾವಿಗೂ ಮುನ್ನ ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಮಹಿಳೆಯೇ ತನ್ನ ಸಾವಿಗೆ ಕಾರಣ ಎಂದು ವಿಡಿಯೋದಲ್ಲಿ ಹೇಳಿಕೆ ನೀಡಿ, ನಂತರ ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಶಿವಣ್ಣ ಚೌಧರಿ (40) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ತನ್ನ ವ್ಯಾಟ್ಸ್ ಆ್ಯಪ್ ಸ್ಟೇಟಸ್ನಲ್ಲಿ ಮಹಿಳೆ ಜೊತೆಗಿರುವ ಫೋಟೋಗಳನ್ನು ಹಾಕಿದ್ದಾನೆ. ಮಹಿಳೆಗೆ ಹೆಚ್ಚಿನ ಪ್ರಮಾಣದ ಹಣ ಕೊಟ್ಟಿದ್ದೆ. ಮನೆಯವರ ವಿರೋಧ ಕಟ್ಟಿಕೊಂಡು ಆಕೆಯೊಂದಿಗಿದ್ದೆ. ನನ್ನ ಬಳಿ ಹಣ ಖಾಲಿಯಾದ ಬಳಿಕ ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ ಎಂದಿದ್ದಾಳೆ ಎಂದು ಡೆತ್ನೋಟ್ನಲ್ಲಿ ಶಿವಣ್ಣ ಚೌಧರಿ ಉಲ್ಲೇಖಿಸಿದ್ದಾನೆ. ಆ ಮಹಿಳೆಗೆ ತಕ್ಕ ಪಾಠವಾಗಬೇಕು. ನನ್ನ ಮೂರು ಮಕ್ಕಳು ಅನಾಥವಾದರೂ ಪರವಾಗಿಲ್ಲ. ಆಕೆಗೆ ಶಿಕ್ಷೆಯಾಗಬೇಕು. ನಾನು ಆಕೆಗೆ ಕೊಟ್ಟ ಹಣ ನನ್ನ ಮಕ್ಕಳಿಗೆ ತಲುಪಲಿ ಎಂದು ವಿಡಿಯೋದಲ್ಲಿ ಶಿವಣ್ಣ ತಿಳಿಸಿದ್ದಾನೆ. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.