ಕರ್ನಾಟಕ

karnataka

By

Published : Jun 21, 2020, 3:53 PM IST

ETV Bharat / state

ಗ್ರಹಣದ ವೇಳೆ ರೂಢಿಗತ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್

ಸೂರ್ಯಗ್ರಹಣ ಇರುವುದರಿಂದ ಸಭೆ ನಡೆಸುವುದು ಸೂಕ್ತವಲ್ಲ ಎಂಬ ಸಿಬ್ಬಂದಿ ಮಾತಿಗೆ ಉತ್ತರಿಸುತ್ತ, ಕೆಲಸ ಮಾಡಲು ಅಮವಾಸ್ಯೆ, ಗ್ರಹಣ ಎಂದಿಗೂ ಅಡ್ಡಿ ಬರುವುದಿಲ್ಲ. ಬಸವ ತತ್ವವನ್ನು ಕೇವಲ ಬಾಯಿಯಿಂದ ಹೇಳಿದರೆ ಸಾಲದು, ಆಚರಣೆಗೂ ತರಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್​​ ಇಡೀ ದಿನ ಸಭೆಗಳನ್ನು ನಿಗದಿಪಡಿಸಿದ್ದಾರೆ.

M B Patil conduct meeting during the time of solar eclipse
ಮಾಜಿ ಸಚಿವ ಎಂ ಬಿ ಪಾಟೀಲ್​.

ವಿಜಯಪುರ: ಸೂರ್ಯಗ್ರಹಣವಿದ್ದರೂ ಮಾಜಿ ಸಚಿವ ಎಂ.ಬಿ.ಪಾಟೀಲ್​​ ರೂಢಿಗತ ಸಂಪ್ರದಾಯವನ್ನು ಬದಿಗೊತ್ತಿ ಇಡೀ ದಿನ ವಿವಿಧ ಇಲಾಖೆಗಳ ಹಾಗೂ ತಮ್ಮ ಬಿ.ಎಲ್.ಡಿ.ಇ ಸಂಸ್ಥೆಗೆ ಸಂಬಂಧಿಸಿದ ಸಭೆಗಳನ್ನು ನಡೆಸಿದ್ದಾರೆ.

ಶನಿವಾರ ಬೆಳಿಗ್ಗೆಯೇ ಭಾನುವಾರದ ಸಭೆಗಳನ್ನು ನಿಗದಿಪಡಿದ್ದ ಅವರು,ಗ್ರಹಣ ಇರುವುದರಿಂದ ಸಭೆ ನಡೆಸುವುದು ಸೂಕ್ತವಲ್ಲ ಎಂಬ ಸಿಬ್ಬಂದಿ ಮಾತಿಗೆ ಉತ್ತರಿಸುತ್ತಾ, ಕೆಲಸ ಮಾಡಲು ಅಮವಾಸ್ಯೆ, ಗ್ರಹಣ ಎಂದಿಗೂ ಅಡ್ಡಿಯಾಗುವುದಿಲ್ಲ. ಬಸವ ತತ್ವವನ್ನು ಕೇವಲ ಬಾಯಿಯಿಂದ ಹೇಳಿದರೆ ಸಾಲದು; ಆಚರಣೆಗೂ ತರಬೇಕು ಎಂದು ಇಂದು ಇಡೀ ದಿನ ಸಭೆಗಳನ್ನು ನಿಗದಿಪಡಿಸಿಕೊಂಡಿದ್ದರು.

ಅದರಂತೆ ಬೆಳಿಗ್ಗೆ ಬೃಹತ್ ನೀರಾವರಿ ಇಲಾಖೆಯ ತಮ್ಮ ಬಬಲೇಶ್ವರ ಕ್ಷೇತಕ್ಕೆ ಸಂಬಂಧಿಸಿದ ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆ, ಮುಳವಾಡ ಏತ ನೀರಾವರಿ ಯೋಜನೆಯ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಜಾಕ್​ವೆಲ್​ಗಳಲ್ಲಿ ಮೋಟಾರ್ ದುರಸ್ಥಿ, ಶಾಖಾ ಕಾಲುವೆಗಳ ಕಾಮಗಾರಿಯ ಪ್ರಗತಿಯ ವಿವರಗಳು, ಭೂಸ್ವಾಧೀನಕ್ಕೆ ಸಂಬಂಧಿಸಿದ ಅನುದಾನ ಬಿಡುಗಡೆ ಕುರಿತು ಸವಿವರವಾಗಿ ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಮಂತ್ರಿಗಳು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಈ ಎರಡು ಯೋಜನೆಗಳಿಗೆ ಸಂಬಂಧಿಸಿದ ಮಹತ್ವದ ವಿಷಯಗಳ ಕುರಿತು ಮಾತನಾಡಿದರು.

ಅಲ್ಲದೇ, ಸಣ್ಣ ನೀರಾವರಿ ಇಲಾಖೆಯಿಂದ ಅಂತರ್ಜಲ ವೃದ್ಧಿಯಾಗಲು, ವಿವಿಧ ನಾಲೆಗಳಿಗೆ ಅಗತ್ಯವಿರುವೆಡೆ ಚೆಕ್‍ಡ್ಯಾಂ ನಿರ್ಮಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಅವರು ಮಾಹಿತಿ ಸಂಗ್ರಹಿಸಿದ್ದಾರೆ.

ನಂತರ ಮಧ್ಯಾಹ್ನ ಬಿ.ಎಲ್.ಡಿ.ಇ ಸಂಸ್ಥೆ ಎ.ವಿ.ಎಸ್. ಆಯುರ್ವೇದ ಕಾಲೇಜಿಗೆ ಸಂಬಂಧಿಸಿದ ಸಭೆಯಲ್ಲಿ ಪಾಲ್ಗೊಂಡರು. ಸರ್ಕಾರದಿಂದ ಸಂಸ್ಥೆಗೆ ನೀಡಿದ 17ಎಕರೆ ಲೀಸ್ ಆಸ್ತಿಯಲ್ಲಿ, ಅನೇಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು, ಮನೆಗಳನ್ನು ಕಟ್ಟಿಕೊಂಡಿದ್ದು, ಒತ್ತುವರಿದಾರರನ್ನು ತೆರವುಗೊಳಿಸಲು ಅಗತ್ಯ ಕಾನೂನು ಕ್ರಮ ಜರುಗಿಸುವ ಕುರಿತ ಸಭೆ ಇದಾಗಿತ್ತು.

ನಂತರ ಬಿ.ಎಲ್.ಡಿ.ಇ ಸ್ವಾಯತ್ತ ವಿವಿ ಕಚೇರಿಗೆ ತೆರಳಿ ಉಪಕುಲಪತಿ ಹಾಗೂ ವಿವಿ ಪ್ರಮುಖರೊಂದಿಗೆ ಮಹತ್ವದ ಸಭೆ ನಡೆಸಿದರು.
ಈ ಮೂಲಕ ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡ ಬಂದಿರುವ ರೂಢಿಗತ ಸಂಪ್ರದಾಯಗಳನ್ನು ಮುರಿದು, ಕ್ರಿಯಾಶೀಲ ಕಾರ್ಯದಿಂದ ಎಂ.ಬಿ.ಪಾಟೀಲ ಗಮನ ಸೆಳೆದರು.

ABOUT THE AUTHOR

...view details