ಅಬಕಾರಿ ಇಲಾಖೆಯ ಭರ್ಜರಿ ಕಾರ್ಯಾಚರಣೆ ವಿಜಯಪುರ :ರಾಜ್ಯದಲ್ಲಿವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಆಯೋಗ ನೀಡಿದ ಸೂಚನೆಯ ಮೇರೆಗೆ ಮದ್ಯ ಮಾರಾಟ ಹಾಗೂ ಸಾಗಾಣಿಕೆ ಮೇಲೆ ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕೇವಲ 1 ತಿಂಗಳಲ್ಲಿ 57 ಲಕ್ಷ ರೂ.ಗಿಂದ ಅಧಿಕ ಮೌಲ್ಯದ ಮದ್ಯ ಹಾಗೂ ಇನ್ನಿತರ ಅಕ್ರಮವಾಗಿ ಸಾಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡು 115 ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಅಲರ್ಟ್ ಆಗಿದ್ದ ಅಬಕಾರಿ ಇಲಾಖೆ ಎರಡು ಖಾಯಂ ಚೆಕ್ ಪೋಸ್ಟ್ ಹೊರತುಪಡಿಸಿ, ಹೆಚ್ಚುವರಿಯಾಗಿ ಇನ್ನೂ 7 ಸೇರಿ ಒಟ್ಟು 9 ಚೆಕ್ ಪೋಸ್ಟ್ಗಳನ್ನು ನಿರ್ಮಿಸಿತ್ತು. ಗಡಿ ಭಾಗವಾದ ಈ ಪ್ರದೇಶಗಳಲ್ಲಿ ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯದಿಂದ ಅಕ್ರಮ ಮದ್ಯ ಸಾಗಾಣಿಕೆ ಮಾಡದಂತೆ ನಿರ್ಬಂಧ ಹೇರಿ ಅಪಾರ ಪ್ರಮಾಣದ ವಿವಿಧ ಬ್ಯ್ರಾಂಡ್‌ಗಳ ಮದ್ಯ ಹಾಗೂ ಸಾಗಣಿಕೆಗೆ ಬಳಸಿದ ವಾಹನಗಳನ್ನು ಜಪ್ತಿ ಮಾಡಿದೆ.
ಈ ಕುರಿತು ಮಾಹಿತಿ ನೀಡಿದ ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ, 216 ಕಡೆ ದಾಳಿ ನಡೆಸಿ 115 ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 185 ಪ್ರಕರಣ ದಾಖಲಿಸಿದ್ದೇವೆ. 2151.45. ಲೀಟರ್ ಮದ್ಯ ಹಾಗೂ ಹೊರ ರಾಜ್ಯದಿಂದ ಸಾಗಿಸುತ್ತಿದ್ದ 25 ಲೀಟರ್ ಕಳ್ಳಭಟ್ಟಿ ಸೇರಿ 11574.45 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಅಂದಾಜು 57.74 ಲಕ್ಷ ರೂ. ಅಕ್ರಮ ಮದ್ಯ ಸಾಗಿಸಲು ಬಳಸಿದ್ದ 28 ವಾಹನಗಳು ಸೇರಿ ಇಲ್ಲಿಯವರೆಗೆ 94.69 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಒಂದು ತಿಂಗಳ ಅವಧಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಳ್ಳಭಟ್ಟಿ ನಿಯಂತ್ರಣಕ್ಕೆ ಕ್ರಮ:ಜಿಲ್ಲೆಯಲ್ಲಿ ಕಳ್ಳಭಟ್ಟಿ ಕಾಯಿಸುವುದು, ಮಾರಾಟ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶವಿದೆ. ಕಳ್ಳಭಟ್ಟಿ ಸೇವಿಸಿ ಸಾಯುವ ಪ್ರಕರಣಗಳು ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ ನಡೆದಿವೆ. ಇಲ್ಲಿಯೂ ಮರುಕಳಿಸದಂತೆ ಕಳ್ಳಭಟ್ಟಿ ಅಡ್ಡೆಗಳ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಈ ಹಿಂದೆ ಪ್ರಕರಣದಲ್ಲಿ ಬಂಧಿಸಿದವರನ್ನು ಪುನ: ವಶಕ್ಕೆ ಪಡೆದು ಅವರಿಗೆ ಎಚ್ಚರಿಕೆ ನೀಡುವ ಕೆಲಸ ಸಹ ಮಾಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ :ಹಿರೇಬಾಗೇವಾಡಿ ಚೆಕ್ ಪೋಸ್ಟ್ ಬಳಿ 14 ಕೆ.ಜಿ ಬೆಳ್ಳಿ ಜಪ್ತಿ