ವಿಜಯಪುರ: ಮಹಾಮಾರಿ ಕೊರೊನಾ ಆರ್ಭಟ ಇನ್ನೂ ಹೆಚ್ಚಿರುವ ಕಾರಣ ವಿಜಯಪುರ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರೆದಿದೆ. ಹೀಗಿದ್ದರೂ ಸಹ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದ ಕೆಎಸ್ ಆರ್ಟಿಸಿ ಬಸ್ ಸೇವೆ ಆರಂಭಿಸಲಾಗಿದೆ.
ವಿಜಯಪುರದಲ್ಲಿ ಬಸ್ ಸಂಚಾರ ಆರಂಭ ಮೊದಲ ದಿನವಾದ ಇಂದು ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ರಾಜ್ಯದ ವಿವಿಧ ನಗರ, ಗ್ರಾಮೀಣ ಭಾಗ ಹಾಗೂ ಜಿಲ್ಲಾ ಕೇಂದ್ರದ ಜತೆಗೆ ಬೇರೆ ರಾಜ್ಯಗಳಿಗೂ ಬಸ್ ಆರಂಭಿಸಲಾಗಿದೆ. ಸಾರ್ವಜನಿಕ ಮಾಹಿತಿ ಕೊರತೆಯಿಂದ ಬೆರಳಣಿಕೆಯಷ್ಟು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಅವರ ಸಂಖ್ಯೆಗೆ ಅನುಗುಣವಾಗಿ ಕೆಎಸ್ಆರ್ಟಿಸಿ ಘಟಕ 650 ಬಸ್ಗಳ ವ್ಯವಸ್ಥೆ ಮಾಡಿತ್ತು.
ಪ್ರಯಾಣಿಕರ ವಾಗ್ವಾದ:
ಮೊದಲ ದಿನವಾದ ಕಾರಣ ಬಸ್ ಸಿಬ್ಬಂದಿಗಳಲ್ಲಿಯೂ ಸಾಕಷ್ಟು ಗೊಂದಲಗಳಿದ್ದವು. ಕೆಲ ಬಸ್ಗಳು ಒಂದೇ ನಗರಗಳ ಮಾರ್ಗವಾಗಿ ಸಂಚರಿಸುತ್ತಿರುವ ಕಾರಣ ಕೆಲ ಗ್ರಾಮೀಣ ಪ್ರದೇಶಗಳಿಗೆ ಬಸ್ ಇರಲಿಲ್ಲ. ಇದರಿಂದ ಆ ಭಾಗಕ್ಕೆ ತೆರಳಲು ಬಸ್ ಸಿಗದೆ ಪ್ರಯಾಣಿಕರು ಬಸ್ ಸಿಬ್ಬಂದಿ ಜತೆ ವಾಗ್ವಾದ ನಡೆಸಿದ ಪ್ರಸಂಗ ನಡೆಯಿತು. ಆ ಬಳಿಕ ಪ್ರಯಾಣಿಕರ ಒತ್ತಾಯಕ್ಕೆ ಮಣಿದು ಬಸ್ ವ್ಯವಸ್ಥೆ ಸಹ ತಕ್ಷಣ ಮಾಡಲಾಯಿತು.
ಮಾರ್ಗಸೂಚಿ ಪಾಲನೆ:
ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಯನ್ನು ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಅನುಸರಿಸಿ ಬಸ್ ಸೌಲಭ್ಯ ಪಡೆಯಲು ಅನುವು ಮಾಡಿಕೊಡಲಾಯಿತು. ಎರಡು ಸೀಟಿನಲ್ಲಿ ಒಬ್ಬರು ಹಾಗೂ ಮೂರು ಸೀಟಿನಲ್ಲಿ ಇಬ್ಬರು ಕುಳಿತು ಪ್ರಯಾಣ ಬೆಳೆಸುವ ವ್ಯವಸ್ಥೆ ಸಹ ಮಾಡಲಾಗಿತ್ತು.
ಬಸ್ಗಳಿಗೆ ಶೃಂಗಾರ:
ಕೆಲ ಬಸ್ಗಳಿಗೆ ಚಾಲಕರು, ನಿರ್ವಾಹಕರು ಸೇರಿ ಔಷಧೀಯ ಗುಣವುಳ್ಳ ಸಸ್ಯಗಳನ್ನು ಬಳಸಿ ಬಸ್ಗೆ ಶೃಂಗಾರ ಮಾಡಿದ್ದಾರೆ. ಕೊರೊನಾ ಮಹಾಮಾರಿ ಮತ್ತೊಮ್ಮೆ ಬರಬಾರದು, ಶುದ್ಧ ಗಾಳಿ ಪ್ರಯಾಣಿಕರಿಗೆ ದೊರೆಯಲಿ ಎನ್ನುವ ಸದುದ್ದೇಶದಿಂದ ಈ ಕಾರ್ಯ ಮಾಡಲಾಗಿತ್ತು. ಬಸ್ ಸಿಬ್ಬಂದಿಯ ಈ ಕಾರ್ಯಕ್ಕೆ ಕೆಎಸ್ಆರ್ಟಿಸಿ ಡಿಸಿ ಹಾಗೂ ಪ್ರಯಾಣಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಮುದ್ದೇಬಿಹಾಳದಲ್ಲೂ ಬಸ್ ಸಂಚಾರ ಆರಂಭ:
ವಿಜಯಪುರದಲ್ಲಿ ಬಸ್ ಸಂಚಾರ ಆರಂಭ ರಾಜ್ಯಾದ್ಯಂತ ಬಸ್ ಸೇವೆಗೆ ಚಾಲನೆ ದೊರಕಿರುವ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಸಾರಿಗೆ ಘಟಕದಲ್ಲೂ ಹಬ್ಬದ ಸಂಭ್ರಮ ಕಂಡು ಬಂದಿದೆ. ಬಸ್ ಸೇವೆಗೆ ಚಾಲನೆ ನೀಡುವುದಕ್ಕೂ ಮುನ್ನ ಮತ್ತೊಮ್ಮೆ ಕೊರೊನಾ ಅಲೆ ಹೆಚ್ಚದಿರಲಿ, ಬಸ್ ಸೇವೆಗೆ ತೊಂದರೆಯಾಗದಿರಲಿ ಎಂದು ಇಲ್ಲಿನ ಸಾರಿಗೆ ಸಿಬ್ಬಂದಿ ಬಸ್ ಎದುರು ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಘಟಕ ವ್ಯವಸ್ಥಾಪಕ ರಾವಸಾಬ ಹೊನಸೂರೆ, ಮೇಲಾಧಿಕಾರಿಗಳ ನಿರ್ದೇಶನದಂತೆ ಇಂದಿನಿಂದ ಬಸ್ ಸೇವೆಗೆ ಚಾಲನೆ ನೀಡುತ್ತಿದ್ದೇವೆ. ಸದ್ಯಕ್ಕೆ ದೂರದೂರಿಗೆ ಮೊದಲ ಆದ್ಯತೆ ನೀಡುತ್ತಿದ್ದು ಜನಸಂಚಾರ ನೋಡಿಕೊಂಡು ಬಸ್ ಸೇವೆ ಹೆಚ್ಚಿಸುವುದಾಗಿ ಹೇಳಿದರು.
ಸಾರ್ವಜನಿಕರು ಚಾಲಕ,ನಿರ್ವಾಹಕರೊಂದಿಗೆ ಸಹಕಾರದಿಂದ ನಡೆದುಕೊಳ್ಳಬೇಕು.ಕೋವಿಡ್ ನಿಯಮದಂತೆ ಬಸ್‌ಗಳಲ್ಲಿ ಅಂತರ ಕಾಯ್ದುಕೊಂಡು ಸಾರಿಗೆ ಸೇವೆಯನ್ನು ನೀಡುವುದಾಗಿ ತಿಳಿಸಿದ್ದಾರೆ.
ಪ್ರಯಾಣಿಕನೋರ್ವ ಮಾತನಾಡಿ, ಇಷ್ಟು ದಿನ ಖಾಸಗಿ ಸಾರಿಗೆಗೆ ದುಪ್ಪಟ್ಟು ಹಣ ಕೊಟ್ಟು ಸಂಚರಿಸಿದ್ದೆವು.ಇದೀಗ ಸರ್ಕಾರಿ ಸಾರಿಗೆ ಆರಂಭಿಸಿರುವುದು ಖುಷಿ ತಂದಿದೆ ಎಂದು ಹೇಳಿದರು.
ಸಾರಿಗೆ ನೌಕರ ನಾಗಪ್ಪ ಬಾಚಿಹಾಳ ಮಾತನಾಡಿ, ನಮ್ಮ ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ನಡೆಸಿದಾಗ ಹದಿನೈದು ದಿನ ಸಂಚಾರ ಸ್ಥಗಿತವಾಗಿತ್ತು. ನಂತರ ಲಾಕಡೌನ್ ಬಳಿಕ ಎರಡು ತಿಂಗಳ ಕಾಲ ಬಸ್ ಸಂಚಾರ ಬಂದ್ ಆಗಿತ್ತು. ಇದರಿಂದ ನಮ್ಮ ಚಾಲಕ -ನಿರ್ವಾಹಕರು ನಿತ್ಯದ ಜೀವನ ನಡೆಸಲು ಕಷ್ಟಪಡುವಂತಾಗಿತ್ತು.ಇದೀಗ ಮತ್ತೆ ಬಸ್ ಸೇವೆ ಚಾಲನೆ ದೊರೆತಿದ್ದು ಸಂತಸ ತಂದಿದೆ. ಇನ್ನು ಮುಂದೆ ಈ ಕೊರೊನಾ ಎಂದಿಗೂ ಮತ್ತೆ ಬರಬಾರದು ಎಂದು ಪ್ರಾರ್ಥಿಸುವುದಾಗಿ ಹೇಳಿದರು.