ವಿಜಯಪುರ:ಜಿಲ್ಲೆಯಲ್ಲಿ ಮೇಲ್ನೋಟಕ್ಕೆ ಸಕ್ರಮವಾಗಿ ಗಣಿಗಾರಿಕೆ ಮತ್ತು ಜಲ್ಲಿ ಕಲ್ಲು ಕ್ರಷರ್ ವ್ಯವಹಾರ ನಡೆಯುತ್ತಿವೆ ಅನಿಸಿದರೂ ಅದರ ನಿಯಮಾವಳಿಗಳನ್ನು ಗಾಳಿಗೆ ತೂರಿ ಗಣಿಗಾರಿಕೆ ನಡೆಸಲಾಗುತ್ತಿದೆ. ಆದ್ರೆ ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳು ಮಾತ್ರ ಇದನ್ನು ಒಪ್ಪುತ್ತಿಲ್ಲ.
ವಿಜಯಪುರದಲ್ಲಿ ಸೌಂಡ್ ಮಾಡ್ತೀವೆ ಸ್ಟೋನ್ ಕ್ರಷರ್ಸ್ ಹೌದು, ಜಿಲ್ಲೆಯಲ್ಲಿ ಗಣಿಗಾರಿಕೆಗಿಂತ ಜಲ್ಲಿ ಕ್ರಷರ್ ಹಾವಳಿ ಹೆಚ್ಚಾಗಿದೆ. ನಗರದ ಹೊರವಲಯದ ಕಲ್ಲು ಕ್ವಾರಿಗಳಲ್ಲಿ ಕ್ರಷರ್ ಸದ್ದು ಮಾಡುತ್ತಿವೆ. ಅದರಲ್ಲಿಯೂ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಕ್ರಷರ್ಗಳು ಗಾಳಿಗೆ ತೂರಿವೆ. ಇದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ಗೊತ್ತಿದ್ದರೂ ಕಂಡೂ ಕಾಣದಂತೆ ಗಾಢ ನಿದ್ರೆಗೆ ಜಾರಿದ್ದಾರೆ.
ಇದರಲ್ಲಿ ಮುಖ್ಯವಾಗಿ ಕಲ್ಲು ಗಣಿಗಾರಿಕೆ ಮಾಡಲು ಅನುಮತಿ ಪಡೆದ ಸ್ಥಳವೇ ಬೇರೆ, ಕಲ್ಲು ಗಣಿಗಾರಿಕೆ ಮಾಡುವ ಸ್ಥಳವೇ ಬೇರೆಯಾಗಿದೆ. ಈ ರೀತಿ ಕಣ್ಣುಮುಚ್ಚಾಲೆ ಆಟ ನಡೆದೆ ಇದೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಗಣಿ ಇಲಾಖೆಯ ಅಧಿಕಾರಿಗಳನ್ಮು ತರಾಟೆಗೆ ತೆಗೆದುಕೊಂಡು, ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವವರ ಮಾಹಿತಿ ನೀಡಿ, ಅವರ ಲೈಸನ್ಸ್ ರದ್ದುಗೊಳಿಸಲು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಓದಿ-'ನಾಳಿನ ಕೇಂದ್ರ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ': ಸಿದ್ದರಾಮಯ್ಯ
ಕ್ರಷರ್ ನಡೆಸುವವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೆಲವು ನಿಯಮ ಪಾಲಿಸಲು ಸೂಚನೆ ನೀಡಿರುತ್ತದೆ. ಕ್ರಷರ್ ಹಾಗೂ ಕಲ್ಲು ಗಣಿಗಾರಿಕೆಯ ಧೂಳು ಹಾರದಂತೆ ಸುತ್ತಲೂ ಮರ ಬೆಳೆಸಬೇಕು ಅಥವಾ ಕಂಪೌಂಡ ನಿರ್ಮಿಸಬೇಕು. ಬ್ಲಾಸ್ಟಿಂಗ್ ಮಾಡುವ ವೇಳೆ ಕಲ್ಲು ಹೊರಗಡೆ ಸಿಡಿಯದಂತೆ ನೋಡಿಕೊಳ್ಳಬೇಕು ಎನ್ನುವ ನಿಯಮವಿದೆ. ಆದರೆ ಜಿಲ್ಲೆಯಲ್ಲಿ ಅದರ ಪಾಲನೆಯಾಗಿಲ್ಲ. ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಗುತ್ತಿಗೆ 89 ಹಾಗೂ ಜಲ್ಲಿ ಕಲ್ಲು ಕ್ರಷರ್ ಘಟಕಗಳು 87 ಇದೆ ಎನ್ನುವ ಅಧಿಕೃತ ಮಾಹಿತಿ ಮಾತ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನೀಡುತ್ತಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಜಲ್ಲಿ ಕಲ್ಲು ಕ್ರಷಿಂಗ್ ದಂಧೆ ಸದ್ದಿಲ್ಲದೇ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ನಮಗೂ ಅದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಈಗ ತಾನೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿರುವ ಪಕ್ಕದ ಜಿಲ್ಲೆಯ ಮುರುಗೇಶ ನಿರಾಣಿ ಹಾಗೂ ಜಿಲ್ಲಾಧಿಕಾರಿ ಸುನೀಲಕುಮಾರ ಒಮ್ಮೆ ಇತ್ತ ಗಮನ ಹರಿಸಬೇಕಾಗಿದೆ. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಶಿವಮೊಗ್ಗ ರೀತಿಯ ಘಟನೆ ಈ ಜಿಲ್ಲೆಯಲ್ಲಿ ಆದರೂ ಅಚ್ಚರಿ ಪಡುವ ಹಾಗಿಲ್ಲ.