ವಿಜಯಪುರ: ವಿರೋಧ ಪಕ್ಷದವರ ಹೇಳಿಕೆಗೆ ಉತ್ತರ ಕೊಡಲು ಆಗುವುದಿಲ್ಲ. ವಿಪಕ್ಷದವರು ಇಲ್ಲ ಸಲ್ಲದ ಹೇಳಿಕೆಗಳನ್ನು ಕೊಡುತ್ತಾರೆ. ಅದಕ್ಕೆಲ್ಲ ಉತ್ತರ ಕೊಡೋದಕ್ಕೆ ಆಗಲ್ಲ ಎಂದು ಗೃಸಚಿವ ಡಾ. ಜಿ ಪರಮೇಶ್ವರ್ ವಿಪಕ್ಷ ನಾಯಕ ಆರ್. ಅಶೋಕ್ ಅವರ ರಾಜ್ಯದಲ್ಲಿ ಮೂರು ಸಿಎಂಗಳಿದ್ದಾರೆ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಗೃಹ ಸಚಿವ ಜಿ ಪರಮೇಶ್ವರ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮಾಧ್ಯಮದವರ ಜೊತೆ ಮಾತನಾಡಿದರು. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕೇಂದ್ರ ಸರ್ಕಾರ ಒಂದು ಬಿಡಿಗಾಸು ಬಿಡುಗಡೆ ಮಾಡಿಲ್ಲ. ಮೊದಲು ಹಣ ಬಿಡುಗಡೆ ಮಾಡೋಕೆ ಹೇಳಿ ಅವರಿಗೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಏನೆಲ್ಲ ಹಣ ಕೊಡಬೇಕು. ಅದನ್ನು ಕೇಳುವುದು ನಮ್ಮ ಹಕ್ಕು. ಎನ್ಡಿಆರ್ಎಫ್ ನಿಯಮದಂತೆ 17 ಸಾವಿರ ಕೋಟಿ ನಷ್ಟದ ಮನವಿಯನ್ನು ಕೇಂದ್ರಕ್ಕೆ ಕೊಟ್ಟಿದ್ದೇವೆ. ಆದರೆ, ಕೇಂದ್ರ ಬರಗಾಲಕ್ಕಾಗಿ ಒಂದು ಬಿಡಿಗಾಸು ಹಣ ಬಿಡುಗಡೆ ಮಾಡಿಲ್ಲ. ಅದನ್ನೇ ಕೇಳೋಕೆ ಹೇಳಿ ಅವರಿಗೆ ಮೊದಲು ಎಂದು ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾರ್ಯಕರ್ತರ ಸಂಭ್ರಮದಿಂದ ಸಚಿವರು ಹೈರಾಣ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವ ವೇಳೆ ಹೂ ಹಾಕದಂತೆ ಗೃಹ ಸಚಿವರು ಕಾರ್ಯಕರ್ತರ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ, ಆದರೆ ಗೃಹ ಸಚಿವರ ಮಾತಿಗೆ ಬೆಲೆ ಕೊಡದೇ ಕಾರ್ಯಕರ್ತರು ಗೃಹ ಸಚಿವರ ಮೇಲೆ ಹೂವಿನ ಮಳೆಗರೆದಿದ್ದಾರೆ. ಕಾಂಗ್ರೆಸ್ ಕಚೇರಿ ಮೇಲಿನಿಂದ ಹಾ ಹಾಕಿದ ಕಾರಣ ಗೃಹಸಚಿವರು ತಾವು ಬಂದಿದ್ದ ಕಾರು ಬಿಟ್ಟು ಕೆಳಗೆ ಇಳಿದಿರಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮದಿಂದ ಹೈರಾಣಾದ ಗೃಹ ಸಚಿವರಾದ ಪರಮೇಶ್ವರ ಹಾಗೂ ಶಿವಾನಂದ ಪಾಟೀಲ್ ಕಾರಿನಲ್ಲೇ ಲಾಕ್ ಆಗಿದ್ದರು.
ನಗರದ ಐತಿಹಾಸಿಕ ಹಾಸೀಂ ಪೀರ್ ದರ್ಗಾಕ್ಕೆ ಭೇಟಿ ನೀಡಿದ ಗೃಹ ಸಚಿವ ಜಿ ಪರಮೇಶ್ವರ್ ಕೆಲಕಾಲ ತಲೆ ಮೇಲೆ ಚಾದರ್ ಹೊತ್ತು ಚಾದರ್ ಸೇವೆ ಸಲ್ಲಿಸಿದರು. ಸಚಿವ ಶಿವಾನಂದ ಪಾಟೀಲ್, ಶಾಸಕ ವಿಠಲ ಕಟಕದೊಂಡ, ಧರ್ಮಗುರು ಡಾ ಸಯ್ಯದ್ ಸಹಾ ಮುರ್ಷೀದ್ ಪೀರಾ ಸಜ್ಜಾದೆ ನಶೀನ್ ಸೇರಿದಂತೆ ಇತರರು ಇದ್ದರು. ಗೃಹ ಸಚಿವರಿಗೆ ಒಳಿತಾಗಲಿ ಎಂದು ದರ್ಗಾದ ಗುರುಗಳು ಪ್ರಾರ್ಥನೆ ಮಾಡಿ ಆಶೀರ್ವದಿಸಿದರು.
ದರ್ಗಾಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ಸತೀಶ ಜಾರಕಿಹೊಳಿ ಸಿಎಂ ಆಗಲಿ ಎಂಬ ಸವದತ್ತಿ ಶಾಸಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನೋಡಿ ನಮ್ಮ ಬೆಂಬಲಿಗರು ಇರುತ್ತಾರೆ. ಅವರಿಗೆ ತಮ್ಮ ನಾಯಕರು ಶಾಸಕರಾಗಬೇಕು, ಸಂಸದರಾಗಬೇಕು, ಸಚಿವರಾಗಬೇಕು, ಉಪ ಮುಖ್ಯಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು ಎಂಬ ಆಸೆಗಳು ಇರುತ್ತವೆ. ಆದರೆ, ಇನ್ನೊಂದೆಡೆ ಒಂದು ಪಕ್ಷದಲ್ಲಿ ವ್ಯವಸ್ಥೆ ಅಂತ ಇರುತ್ತೆ. ನಮ್ಮ ಪಕ್ಷದಲ್ಲಿ ಹೈ ಕಮಾಂಡ್ ಇದೆ, ಆಯಾ ಸಂದರ್ಭಕ್ಕೆ ಅನುಗುಣವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬೆಂಬಲಿಗರು ಹೇಳಿದ್ದಕ್ಕೆ ನಾವು ಅಬ್ಜಕ್ಷನ್ ಮಾಡೋಕಾಗುತ್ತಾ? ಎಂದು ಹೇಳಿದರು.